ಮಂಗಳವಾರ, ನವೆಂಬರ್ 10, 2009

ಕುವೆಂಪು – ಕುಪ್ಪಳ್ಳಿಯ ಗರಿ, ಕರ್ನಾಟಕದ ಸಿರಿ ಕನ್ನಡದ ಕಂಪು



ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು!!!! ಈ ಹಾಡು ಎಷ್ಟು ಜನರಿಗೆ ಗೊತ್ತಿಲ್ಲ ಹೇಳಿ? ಅದರಲ್ಲೂ ನಾವು ದೇಶ ಬಿಟ್ಟು ದೂರ ಇರುವವರು ಈ ಸಾಲುಗಳನ್ನು ಅರ್ಥೈಸಿಕೊಳ್ಳಲೇ ಬೇಕು ಅಲ್ಲವೆ!!! ಇತ್ತೀಚೆಗಷ್ಟೆ ಆ ಸಾಲುಗಳ ರುವಾರಿ ಮಹಾನ್ ಚೇತನ ನನ್ನ ನೆಚ್ಚಿನ ಕವಿಗಳಲ್ಲೊಬ್ಬರಾದ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪನವರ (ಕುವೆಂಪು) ಬಗ್ಗೆ ಹೆಚ್ಚು ತಿಳಿಯಲು ಡಾ. ಕೆ. ಸಿ ಶಿವಾರೆಡ್ಡಿರವರ ಯುಗದಕವಿ ಪುಸ್ತಕವನ್ನು ಓದುವಾಗ ಕುವೆಂಪುರವರಿಗೆ ಕನ್ನಡದತ್ತ ಒಲವು ಮೂಡಿದ್ದು ಹೇಗೆಂದು ತಿಳಿಯಿತು, ಹಾಗಂತ ಅವರು ಕನ್ನಡದ ಒಲವಿಲ್ಲವೆಂದಲ್ಲ ಕನ್ನಡವನ್ನೇ ಆರಾಧ್ಯದೈವನ್ನಾಗಿ ರೂಢಿಸಿಕೊಂಡ ಬಗೆ ಹೀಗಿದೆ ನೋಡಿ...

ಕುವೆಂಪುರವರು ತಮ್ಮ ಸಾಹಿತ್ಯಕೃಷಿಯನ್ನು ಮೊಟ್ಟಮೊದಲು ಮಾತೃಭಾಷೆಯಲ್ಲಿ ಹೆಚ್ಚು ಪ್ರಾರಂಭಿಸಿರಲಿಲ್ಲ, ಪರಭಾಷೆಯಾದ ಇಂಗ್ಲೀಷ್ ಭಾಷೆಯಲ್ಲಿ. ಅವರ ಒಲವು ಹೆಚ್ಚು ಇಂಗ್ಲೀಷ್ ಭಾಷೆಯತ್ತಲೇ ಇತ್ತು ಇಂತಹ ಸ್ಥಿತಿಯಲ್ಲಿ ಬದಲಾವಣೆಯ ಮನಸ್ಸು ಮೂಡಿಸಿದ ಒಂದು ಘಟನೆ ಕುವೆಂಪುರವರ ಜೀವನದಲ್ಲಿ ನೆಡೆದಿತ್ತು..

ಪುಟ್ಟಪ್ಪನವರು ಮೈಸೂರಿನ ತಮ್ಮ ವಿದ್ಯಾಭ್ಯಾಸ ಸಮಯದಲ್ಲಿ ಹಲವು ಇಂಗ್ಲೀಷ್ ಕವಿಗಳನ್ನು ಅನುಕರಿಸಿ ಬರೆದ ಕವನಗಳನ್ನು ತಮ್ಮ ಶಾಲಾವಾರ್ಷಿಕೋತ್ಸವ ಹಾಗೂ ಹಲವಾರು ಸಮಾರಂಭಗಳಲ್ಲಿ ಓದಿಹೇಳಿ ಗುರುಗಳು, ಸ್ನೇಹಿತರು, ಎಲ್ಲರಿಂದ ಬೇಷ್ ಎನಿಸಿಕೊಳ್ಳುತ್ತಿದ್ದರು, ಇಂತಹ ಪ್ರೋತ್ಸಾಹಕ್ಕೆ ಮಾರುಹೋದ ಪುಟ್ಟಪ್ಪನವರು ಇಂಗ್ಲೀಷ್ ಕವನಗಳ ರಚನೆಯನ್ನೇ ಮುಂದುವರಿಸಿದರು. ತಾವು ಎಸ್.ಎಸ್.ಎಲ್.ಸಿ ಓದುತ್ತಿರುವಾಗ (೧೯೨೨) "ಬಿಗಿನರ್ಸ್ ಮ್ಯೂಸ್" ಎಂಬ ಕವನ ಸಂಕಲವನ್ನು ಪ್ರಕಟಿಸಿದ್ದರು. ತಮ್ಮ ಬರವಣಿಗೆಯಿಂದ ಫಲಿಸಿದ ಪ್ರೋತ್ಸಾಹದ ಕಾರಣ ಹೆಚ್ಚು ಇಂಗ್ಲೀಷ್ ಕವನಗಳನ್ನು ರಚಿಸುವತ್ತ ವಾಲಿದರು. ಇದೇ ಸಂದರ್ಭದಲ್ಲಿ ಮೈಸೂರಿಗೆ ಆಗಮಿಸಿದ್ದ ಪ್ರಸಿದ್ಧ ಐರಿಷ್ ಕವಿ ಜೇಮ್ಸ್ ಎಚ್. ಕಸಿನ್ಸ್ ಅವರನ್ನು ಭೇಟಿ ಮಾಡಿ ತಾವು ಬರೆದಿದ್ದ ಕವನಗಳನ್ನು ಅವರಿಗೆ ತೋರಿಸಿದರು, ಕಸಿನ್ಸ್ ರವರು ಪುಟ್ಟಪ್ಪನವರು ಕೊಟ್ಟ ಹಾಳೆಗಳನ್ನು ತಿರುವಿಸಿ ನೋಡಿ ಖಾದಿ ತೊಟ್ಟು ನಿಂತಿದ್ದ ಪುಟ್ಟಪ್ಪನವರತ್ತ ಒಮ್ಮೆ ನೋಡಿದರು.

ಅಸಮಾಧಾನದ ಧ್ವನಿಯಲ್ಲೇ "ಏನಿದೆಲ್ಲ ಕಗ್ಗ ?" (What is all this stuff?)"

"ನಿಮ್ಮ ಮೈಮೇಲೆ ನೋಡಿದರೆ ತಲೆಯಿಂದ ಕಾಲಿನವರೆಗೂ ಸ್ವದೇಶೀ ವಸ್ತುಗಳೇ ಕಾಣುತ್ತಿವೆ !. ಇದು ಮಾತ್ರ ಸ್ವದೇಶಿಯಲ್ಲ !!. ನಿಮ್ಮ ಭಾಷೆಯಲ್ಲಿ ಏನಾದರೂ ಬರೆದಿದ್ದೀರಾ?'' ಎಂದರಂತೆ.
ಅವರ ಇಂಗ್ಲಿಷ್ ಕವನಗಳನ್ನು ನೋಡಿ, ಇತರ ತನ್ನ ಭಾರತೀಯ ಮಿತ್ರರೂ ಅಧ್ಯಾಪಕರೂ ಶ್ಲಾಘಿಸಿದ್ದಂತೆ, ಅವರೂ ಅವುಗಳನ್ನು ಮೆಚ್ಚಿ ಹೊಗಳುತ್ತಾರೆ ಎಂದು ಆಸೆಪಟ್ಟಿದ್ದ ಪುಟ್ಟಪ್ಪನವರಿಗೆ ತುಂಬಾ ನಿರಾಶೆಯಾಯಿತು. ಅವರು ಕನ್ನಡದಲ್ಲಿ ಆಗಲೇ `ಅಮಲನ ಕಥೆ' ಮತ್ತು ಇತರ ಒಂದೆರಡು ಕವನ ಬರೆಯುವ ಪ್ರಯತ್ನವನ್ನೂ ಮಾಡಿದ್ದರಾದರೂ ಅವರ ಪ್ರಶ್ನೆಗೆ ಮರೆತವರಂತೆ ಇಲ್ಲ ಎಂದು ಉತ್ತರಿಸಿದರಂತೆ.

ಬಂಗಾಳಿ ಭಾಷೆಯಲ್ಲಿ ರವೀಂದ್ರನಾಥ ಠಾಗೂರರು ಬಂದರು. ಹೊಸ ಹೊಸ ರೀತಿಯಲ್ಲಿ ಬರೆದರು. ಹೊಸ ಛಂದಸ್ಸುಗಳನ್ನು ಕಂಡುಹಿಡಿದರು. ಅವರಿಗೆ ನೊಬೆಲ್ ಬಹುಮಾನವೂ ಬಂದಿತು! ಹಾಗೆಯೆ ನೀವು ಹೊಸ ಹೊಸ ಛಂದಸ್ಸುಗಳನ್ನು ಕಂಡುಹಿಡಿದು, ಹೊಸ ಹೊಸ ಪದಗಳನ್ನು ಪದಪ್ರಯೋಗಗಳನ್ನು ಸಾಧಿಸಿ, ಬಂಗಾಳಿ ಭಾಷೆಯಲ್ಲಿ ರವೀಂದ್ರನಾಥ ಠಾಗೊರರು ಸಾಹಿತ್ಯ ಲೋಕದಲ್ಲಿ ಸೃಜನತೆಯನ್ನು ಸೃಷ್ಠಿಸಿದ್ದಾರೆ. ಅವರ ಹಲವು ಕವನಗಳನ್ನು ಇಂಗ್ಲೀಷ್ ಭಾಷೆಗೆ ಭಾಷಾಂತರವೂ ಆಗಿದೆ.ನೀವು ನಿಮ್ಮ ಭಾಷೆಯಲ್ಲಿ ಸೃಜನ ಸಾಹಿತ್ಯ ಸೃಷ್ಟಿಸಬಹುದು, ಅಲ್ಲದೆ ಕವಿತೆಯಲ್ಲಿ ಉತ್ತಮ ಸೃಜನ ಸಾಹಿತ್ಯ ಯಾರಿಗೂ ಪರಭಾಷೆಯಲ್ಲಿ ಸಾಧ್ಯವಿಲ್ಲವೆಂದರಂತೆ, ಕೊನೆಗೆ ಕೆಲವು ವಿವೇಕದ ಮಾತನಾಡಿ ಹಸ್ತಪ್ರತಿಯನ್ನು ಪುಟ್ಟಪ್ಪನವರಿಗೆ ಕೊಟ್ಟರಂತೆ. ಕಸಿನ್ಸ್ ಅವರ ಹಿತವಚನದಂತೆ ತನ್ನ ಭಾಷೆಯಾದ ಕನ್ನಡದಲ್ಲಿಯೇ ಬರೆದರೆ ಉತ್ತಮ ಎಂದು ತಿಳಿದು ಹಾಗೂ ಅಂದಿನಿಂದ ಕನ್ನಡದಲ್ಲಿ ಕಾವ್ಯ ರಚಿಸುವ ಸಂಕಲ್ಪ ಪುಟ್ಟಪ್ಪನವರದಾಯಿತು. ಅವರೇ ಹೇಳಿದಂತೆ `ಇದೊಂದು ಐತಿಹಾಸಿಕ ಘಟನೆ'.

ಒಬ್ಬ ಪ್ರಖ್ಯಾತ ವ್ಯಕ್ತಿಯ ಸಾಧನೆ ಹಾಗು ಹೆಸರಿನ ಹಿಂದೆ ಯಾವುದಾದರೊಂದು ಅವಿಸ್ಮರಣೀಯ ಘಟನೆ ಇದ್ದೇ ಇರುತ್ತೆಂಬುದಕ್ಕೆ ಪುಟ್ಟಪ್ಪನವರ ಘಟನೆಯೇ ಒಂದು ಉದಾಹರಣೆ.

ಈ ಘಟನೆಯ ಪ್ರಭಾವದಿಂದಲೇ ಅವರ ಮೊದಲ ಕನ್ನಡ ಕವಿತೆ "ಪೊವು" ರಚನೆಯಾಯಿತು. ತದನಂತರ ತಮ್ಮ ಕಾವ್ಯ ಜೀವನವನ್ನು ಕನ್ನಡದಲ್ಲಿ ಆಧ್ಯಾತ್ಮತೆಯನ್ನು ಮೂಡಿಸಿದರು.
ನಂತರದ ದಿನಗಳಲ್ಲಿ "ಮೋಡಣ್ಣನ ತಮ್ಮ", `ಹಾಳೂರು', `ಬೊಮ್ಮನಹಳ್ಳಿಯ ಕಿಂದರಿ ಜೋಗಿ' ಮುಂದಾದ ಕೃತಿಗಳು ಹೊರಬಂದವು. ಇದೆ ಸಮಯಕ್ಕೆ ಸರಿಯಾಗಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರ ವಿದ್ಯಾರ್ಥಿಯಾಗುವ ಬದಲು ಪುಟ್ಟಪ್ಪನವರು ಕನ್ನಡ ಎಂ. ಎ ಮಾಡಲು ಸೇರಿದರು.

ತಮ್ಮ ವಿದ್ಯಾಭ್ಯಾಸದ ಸಮಯದಲ್ಲೇ "ಜಲಗಾರ" ನಾಟಕದ ರಚನೆಯಾಯಿತು ಆನಂತರದ ದಿನಗಳಲ್ಲಿ `ಯಮನಸೋಲು', `ಬೆರಳ್ಗೆ ಕೊರಳ್', `ಸ್ಮಶಾನ ಕುರುಕ್ಷೇತ್ರಂ' ಹೀಗೆ ಹಲವು ನಾಟಕಗಳು ಹೊರಬಂದವು. ಆನಂತರದ ದಿನಗಳಲ್ಲಿ ಕನ್ನಡ ಬೆಳಗಲು `ಕಿರಿಯ ಕಾಣಿಕೆ' `ತಳಿರು' ಕವನಸಂಕಲನಗಳು ಪ್ರಕಟವಾದವು. ಇದರೊಂದಿಗೆ `ನನ್ನ ಗೋಪಾಲ', `ಸಂನ್ಯಾಸಿ ಮತ್ತು ಇತರ ಕಥೆಗಳು' ಈ ಕವನ,ಕಥೆ, ನಾಟಕ ಕೃತಿಗಳೆಲ್ಲವೂ ಒಂದಾದನಂತರ ಒಂದಂತೆ ಕನ್ನಡಿಗರ ಮನೆಮನಗಳಿಗೆ ತಲುಪಿತು ಈ ಕೃತಿಗಳು ಪ್ರಕಟವಾಗುವಷ್ಟರಲ್ಲಿ ಪುಟ್ಟಪ್ಪನವರು ಕನ್ನಡ ಎಂ. ಎ ಮುಗಿಸಿ ಮಹಾರಾಜಾ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇರಿಕೊಂಡರು. ತದನಂತರದ ದಿನಗಳಲ್ಲಿ ತಮ್ಮ ಜೀವನವನ್ನು ಕನ್ನಡದ ಏಳ್ಗೆಗೆ ಕನ್ನಡ ನಾಡಿನ ಜನರ ಮನದಲ್ಲಿ ಕನ್ನಡತ್ವವನ್ನು ಮೂಡಿಸಿದ "ಜೈ ಭಾರತ ಜನನಿಯ ತನುಜಾತೆ", "ಕನ್ನಡ ಎನೆ ಕುಣಿದಾಡುವುದೆನ್ನೆದೆ", ಎಲ್ಲಾದರೂ ಇರು ಎಂತಾದರೂ ಇರು, ಬಾರಿಸು ಕನ್ನಡ ಡಿಂಡಿಮವ" "ಸಾಯುತಿದೆ ನಿಮ್ಮ ನುಡಿ ಓ ಕನ್ನಡ ಕಂದರಿರಾ" ಮೊದಲಾದ ಪ್ರಸಿದ್ಧ ಕವನಗಳ ಮೂಲಕ ಕನ್ನಡಿಗರಲ್ಲಿ ನುಡಿಯೊಲವು ಮೂಡಿಸಿದ ಮಹಾನ್ ಚೇತನ ನಮ್ಮ ಪುಟ್ಟಪ್ಪನವರು. ಸತ್ತಂತಿಹರನು ಬಡಿದೆಚ್ಚರಿಸಿದ ಸಾಹಸ ಅವರದು... ಕನ್ನಡಕ್ಕಾಗಿ ಕನ್ನಡ ನುಡಿ ಬಗೆಗೆ ಭಾವವ್ಯಂಜಕ ಕವಿತೆಗಳನ್ನು ಬರೆದಿದ್ದಾರೆಂದು ಹೇಳಿದರೆ ತಪ್ಪಾಗಲಾರದು.
೧೯೫೫ ರಲ್ಲಿ ಶ್ರೀರಾಮಾಯಣ ದರ್ಶನಂ ಮಹಾಕಾವ್ಯಕ್ಕೆ (ಕನ್ನಡಕ್ಕೆ ಮೊದಲಿಗೆ) ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಯಿತು. ಇದೇ ವರ್ಷ ಮಹಾರಾಜಾ ಕಾಲೇಜಿನ ಪ್ರಿನ್ಸಿಪಾಲರಾಗಿ ನೇಮಕಗೊಂಡರು. ೩೩ನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮೈಸೂರು ವಿಶ್ವವಿದ್ಯಾಲಯದ ಆಶ್ರಯದಲ್ಲಿ ಈ ಕಾಲಮಾನದಲ್ಲಿ ಸಂಯೋಜಿಸಿದ ಕೀರ್ತಿ ಪುಟ್ಟಪ್ಪನವರಿಗೆ ಸೇರುತ್ತದೆ. ೧೯೫೬ ರಲ್ಲಿ ಮೈಸೂರು ವಿಶ್ವವಿದ್ಯಾಲಯ ಗೌರವ ಡಿ. ಲಿಟ್. ಪ್ರಶಸ್ತಿಯನ್ನು ಪ್ರದಾನ ಮಾಡಿತು. ಇದೇ ವರ್ಷದಲ್ಲಿ ಕರ್ನಾಟಕ ಸರಕಾರ ಪುಟ್ಟಪ್ಪನವರನ್ನು ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ನೇಮಿಸಿತು.
ಪುಟ್ಟಪ್ಪನವರು ಉಪಕುಲಪತಿ ಹುದ್ದೆಯನ್ನು ಸ್ವೀಕರಿಸಿದ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಅನೇಕಸಮಸ್ಯೆಗಳನ್ನು ನಿವಾರಿಸಿದರು ವಿಶ್ವವಿದ್ಯಾಲಯದಲ್ಲಿ ಕನ್ನಡ ಮಾಧ್ಯಮವನ್ನು ಜಾರಿಗೆ ತಂದುದು ಮತ್ತು ಸ್ನಾತಕೋತ್ತರ ಶಿಕ್ಷಣ, ಸಂಶೋಧನೆಗಳಿಗಾಗಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಕುವೆಂಪುರವರು ಕಥೆ, ಕವನ, ಕಾವ್ಯಗಳ ರೂಪದಲ್ಲೇ ಅಲ್ಲದೆ ಕನ್ನಡದ ಉದ್ಧಾರವನ್ನು ಅಖಂಡ ಕರ್ನಾಟಕ ಸ್ಥಾಪನೆ, ಎಲ್ಲ ಹಂತಗಳಲ್ಲಿ ಜನಪರವಾದ ಕನ್ನಡದಲ್ಲಿ ಆಡಳಿತ, ಶಿಕ್ಷಣದ ಎಲ್ಲ ಹಂತಗಳು ಕನ್ನಡ ಮಾಧ್ಯಮದಲ್ಲಿ ಅಳವಡಿಸಿದರು ಹಾಗೂ ಕನ್ನಡದಲ್ಲೇ ಅಧ್ಯಯನ ಶೀಲರಿಗೆ ಉಪಯುಕ್ತವಾಗುವಂತೆ ಪಠ್ಯಪುಸ್ತಕಗಳ ರಚನೆಯತ್ತ ಮುಖಮಾಡಿದರು. ಕನ್ನಡಕಟ್ಟುವ ಕೆಲಸದಲ್ಲಿ ಕುವೆಂಪುರವರದು ಮುಖ್ಯಪಾತ್ರ. ಮೈಸೂರು ವಿಶ್ವವಿದ್ಯಾಲಯದ ಮೊದಲ ಕನ್ನಡಿಗ ಕನ್ನಡ ಪ್ರಾಧ್ಯಪಕ ಕುಲಪತಿಯಾಗಿ "ಮಾನಸ ಗಂಗೋತ್ರಿ" ಯನ್ನು ರೂಪಿಸಿ, ಬೋಧನೆ, ಸಂಶೋಧನೆ, ಪ್ರಸಾರ ಎಂಬ ಮುಮ್ಮುಖದ ಆಯಾಮ ನೀಡಿದರು. ಪ್ರಜೆಗಳಿಂದ ರೂಪುಗೊಂಡ ವಿಶ್ವವಿದ್ಯಾಲಯದಿಂದ ಶ್ರೀಸಾಮಾನ್ಯರಿಗೆ ಅನುಕೂಲಕರವಾಗುವಂತೆ ವಿವಿಧ ವಿಷಯಗಳಲ್ಲಿ ವಿದ್ವಾಂಸರ ಉಪನ್ಯಾಸಗಳನ್ನು ಏರ್ಪಡಿಸಿ ಅಭೂತಪೂರ್ವ ಗ್ರಂಥಗಳನ್ನು ಪ್ರಕಟಿಸಿದರು.
ಕನ್ನಡ ನಾಡು ನುಡಿಗಳ ಬಗ್ಗೆ ಕುವೆಂಪು ಎಷ್ಟು ಅಭಿಮಾನವಿಟ್ಟಿದ್ದರೋ ಅಷ್ಟೇ ಅಭಿಮಾನವನ್ನು ಅವರು ಇಂಗ್ಲೀಷ್ ಭಾಷೆಯನ್ನು ಅಷ್ಟೇ ಇಷ್ಟಪಡುತ್ತಿದ್ದರು. ಭಾಷೆಗಳ ಕಲಿಕೆ-ಭೋಧನೆ ಹಾಗು ಬಳಕೆಗೆ ಸಂಬಂಧಿಸಿದ ವಾಗ್ವಾದಗಳಲ್ಲಿ ಕುವೆಂಪು ಭಾಷೆ ಯಾರಿಗೆ, ಏಕೆ ಎಷ್ಟು ಎಂಬ ಪ್ರಶ್ನೆಗಳನ್ನು ವಿಚಾರಕ್ಕಿಡುತ್ತಾರೆ.ಶಾಲಾ ಹಂತದಲ್ಲಿ ಮೂರು ಭಾಷೆಗಳನ್ನು ಕಡ್ಡಾಯ ಅಥವಾ ಒಂದನೆ ತರಗತಿಯಿಂದ ಇಂಗ್ಲೀಷ್ ಕಲಿಯುವುದರಿಂದ ಪರಿಸ್ಥಿತಿ ಸುಧಾರಿಸುವುದಿಲ್ಲ, ಶಾಲಾದಿನಗಳಲ್ಲಿ ಮೂರು ಭಾಷೆಗಳನ್ನು ಹತ್ತು ಹಲವು ವರ್ಷ ಕಲಿತರೂ ನಾವು ಅವುಗಳ ಮರ್ಮವನ್ನು, ಹೃದಯವನ್ನು ಅರಿತಿಲ್ಲ ಕೇವಲ ಸಿಪ್ಪೆ ಸುಲಿಯುವುದರಲ್ಲೇ ಸುಸ್ತು ಹೊಡೆದಿದ್ದೇವೆಂದು ಹೇಳಿದ್ದಾರೆ.ಅಂತೆಯೇ ಕನ್ನಡಪರ ಹೋರಾಟ ಬರೀ ಬೀದಿಕೂಗಾಗದೇ ಕನ್ನಡತನವನ್ನು ಕಾರ್ಯಗಳಲ್ಲಿ ತೊಡಗಿಸಿದರೆ ಒಳಿತು ಎಂದು ಹೇಳುತ್ತಾರೆ.

ಕುವೆಂಪುರವರಿಗೆ ೧೯೫೭ ರಲ್ಲಿ ಧಾರವಾಡದಲ್ಲಿ ನಡೆದ ೩೯ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಪುಟ್ಟಪ್ಪನವರು ಆಯ್ಕೆಯಾದರು. ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಸೇವೆಗಾಗಿ ೧೯೫೮ ಜನವರಿ ೨೬ ರಂದು ಕೇಂದ್ರ ಸರ್ಕಾರದ ಪರವಾಗಿ ರಾಷ್ಟ್ರಪತಿಗಳು `ಪದ್ಮಭೂಷಣ' ಪ್ರಶಸ್ತಿಯನ್ನು ನೀಡಿ ಗೌರವ ಸಲ್ಲಿಸಿದರು.

೧೯೬೧ ಡಿಸೆಂಬರ್ ತಿಂಗಳಲ್ಲಿ ಮೈಸೂರಿಗೆ ಬಂದಿದ್ದ ಡಾ. ರಾಮಮನೋಹರ ಲೋಹಿಯಾ ಅವರು ಪುಟ್ಟಪ್ಪನವರನ್ನು ಭೇಟಿ ಮಾಡಿದರು. ೧೯೬೩ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಸನ್ಮಾನಿಸಿತು. ಕರ್ನಾಟಕ ಸರ್ಕಾರ ೧೯೬೪ ರಲ್ಲಿ ಪುಟ್ಟಪ್ಪನವರಿಗೆ `ರಾಷ್ಟ್ರಕವಿ' ಪ್ರಶಸ್ತಿಯನ್ನು ನೀಡಿ ಗೌರವಿಸಿತು.

೧೯೬೮ರಲ್ಲಿ ಭಾರತದ ಅತ್ಯುನ್ನತ ಸಾಹಿತ್ಯಕ್ಕೆ ಮೀಸಲಾದ ಜ್ಞಾನಪೀಠ ಪ್ರಶಸ್ತಿಯು ಪುಟ್ಟಪ್ಪನವರಿಗೆ ದೊರೆಯಿತು. ಕನ್ನಡಕ್ಕೆ ಮೊದಲ `ಜ್ಞಾನಪೀಠ'ವನ್ನು ತಂದುಕೊಟ್ಟ ಕೀರ್ತಿ ಅವರದು. ಹಾಗೆಯೇ ಮೊದಲ `ಪಂಪ ಪ್ರಶಸ್ತಿ'ಯನ್ನೂ (೧೯೮೮) ಹಾಗೂ ಮೊದಲ `ಕರ್ನಾಟಕ ರತ್ನ' ಪ್ರಶಸ್ತಿಯನ್ನೂ (೧೯೯೨) ಕರ್ನಾಟಕ ಸರ್ಕಾರ ಸಲ್ಲಿಸಿತು. ಹಂಪಿ ಕನ್ನಡ ವಿಶ್ವವಿದ್ಯಾಲಯವು ೧೯೯೫ ರಲ್ಲಿ ಪುಟ್ಟಪ್ಪನವರಿಗೆ `ನಾಡೋಜ' ಪ್ರಶಸ್ತಿಯನ್ನು ಪ್ರಕಟಿಸಿತು. ಆದರೆ ಅದನ್ನು ಪ್ರದಾನ ಮಾಡುವವರೆಗೆ ಅವರು ಉಳಿಯಲಿಲ್ಲ. ಅನಂತರ ಅದನ್ನು ಮರಣೋತ್ತರವಾಗಿ 'ನಾಡೋಜ' ಪ್ರಶಸ್ತಿಯನ್ನು ನೀಡುವ ಮೂಲಕ ಕವಿಸ್ಮರಣೆ ಮಾಡಿ ಗೌರವ ಸೂಚಿಸಲಾಯಿತು. ೧೯೯೪ ನವೆಂಬರ್ ತಿಂಗಳ ೧೦ ರಂದು ರಾತ್ರಿ ೧ ಗಂಟೆಗೆ ಕುವೆಂಪು ಅವರು ನಿಧನರಾದರು. ಅಂದರೆ ೧೯೯೪ ನವೆಂಬರ್ ೧೧ ರ ರಾತ್ರಿ ಬೆಳಗಿನ ಜಾವ ಈ ಶತಮಾನದ ಕವಿಚೇತನಕ್ಕೆ ಕನ್ನಡ ಜನತೆ ಗೌರವ ಶ್ರದ್ಧಾಂಜಲಿಯನ್ನು ಸಲ್ಲಿಸಿತು.
ಐರಿಶ್ ಕವಿ ಜೇಮ್ಸ್ ಕಸಿನ್ಸ್ ಮುಖಾಂತರ ಕನ್ನಡ ದೀಕ್ಷೆ ತೊಟ್ಟ, ಕಂಕಣ ಕಟ್ಟಿದ ಕವಿ ಕುವೆಂಪು ಅವರ ಅಭಿಮಾನದ ಹಾದಿ ಅನಿಕೇತನವೆಂದು ನಾವು ತಿಳಿದಿರಬೇಕು. ಕನ್ನಡ ನಾಡು ನುಡಿ ಇರುವವರೆಗೆ ಕುವೆಂಪುರವರ ಹೆಸರು, ನಡೆ ನುಡಿ ಆದರ್ಶ ಎಲ್ಲವೊ ರಾಜಿಸುತ್ತಲೇ ಇರುತ್ತದೆ. ಅಂಧತೆಯ ದೇಗುಲವನ್ನು ದಿಕ್ಕರಿಸಿ, ಮನೆಯನೆಂದೊ ಕಟ್ಟದಿರು ಕೊನೆಯನೆಂದೊ ಮುಟ್ಟದಿರು ಎಂದು ಭೋದಿಸಿದ ಕುವೆಂಪು ಅವರಿಗೆ ಸ್ಮಾರಕ, ಕಾಣಿಕೆ ಇತ್ಯಾದಿಗಳ ಅಗತ್ಯವಿಲ್ಲ. ಇಂತಹ ಮಹಾನ್ ಚೇತರನ್ನು ಪಡೆದ ನಾವುಗಳೇ ಧನ್ಯರು. ಈ ಮಹಾನ್ ಚೇತನರಿಗೆ ನಮ್ಮ ಹೃದಯಪೂರ್ವಕ ನಮನಗಳು.

8 ಕಾಮೆಂಟ್‌ಗಳು:

  1. ನಗಿಸು,
    ಕುವೆಂಪುರವರ ಸಾಹಿತ್ಯಜೀವನದ ಬಗೆಗೆ ಸಮಗ್ರವಾಗಿ ತಿಳಿಸಿದ್ದೀರಿ.
    ಈ ಅಮರಚೇತನ ನಮ್ಮನ್ನು ಅಗಲಿದ ದಿನದಂದು ಅವರನ್ನು ನೆನಪಿಸಿದ್ದು ಸಕಾಲಿಕವಾಗಿದೆ. ನಿಮಗೆ ಅಭಿನಂದನೆಗಳು.

    ಪ್ರತ್ಯುತ್ತರಅಳಿಸಿ
  2. ನಗಿಸು ಅವರೇ,
    ನಾನು ಮೊದಲು ಐರಿಶ್ ಕವಿ ಜೇಮ್ಸ್ ಕಸಿನ್ಸ್ ಅವರಿಗೆ ಧನ್ಯವಾದ ಹೇಳುತ್ತೇನೆ.
    ನಿಜಕ್ಕೂ ಅವರು ಅಂದು ನಮ್ಮ ಒಬ್ಬ ಮಹಾನ್ ಚೇತನಕ್ಕೆ ದಾರಿ ತೋರಿಸಿದ್ದರೆ..
    ಮಾಹಿತಿಯುಕ್ತ ಲೇಖನಕ್ಕೆ ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  3. ಸುನಾಥ್ ಸರ್,
    ನಮ್ಮ ಕರುನಾಡ ಚೇತನ ನಮ್ಮನಗಲಿದರೂ ಅವರ ಕನ್ನಡತನ, ಪ್ರೀತಿ, ನಮಗೆ ನೀಡಿದ ಹಸನಾದ ಹಾದಿ ಎಲ್ಲವೂ ಶಾಶ್ವತವಾಗಿ ನಿಲ್ಲುವಂತೆ ಮಾಡಿಹೋಗಿದ್ದಾರೆ ಅವರು ಅಜರಾಮರರು.

    ಪ್ರತ್ಯುತ್ತರಅಳಿಸಿ
  4. ಶಿವಪ್ರಕಾಶ್,
    ಡಾ. ಶಿವಾರೆಡ್ಡಿರವರು ಅತಿ ಅದ್ಭುತವಾಗಿ ಕುವೆಂಪುರವರ ಜೀವನ ಶೈಲಿ...ಅವರ ಜೀವನದಲ್ಲಾದ ಬದಲಾವಣೆ ಎಲ್ಲವನ್ನು ಕಣ್ಣಿಗೆ ಕಟ್ಟುವಂತೆ ನಮಗೆ ನೀಡಿದ್ದಾರೆ. ನಾವು ಕುವೆಂಪುರವರು ಕನ್ನಡಕ್ಕೆ ಹೆಚ್ಚು ಒಲವು ನೀಡಿದ್ದು ಎಲ್ಲವೂ ಚೆನ್ನಾಗಿದೆ.. ಈ ಲೇಖನವನ್ನು ಕನ್ನಡಕೂಟದ ಪತ್ರಿಕೆಯಲ್ಲಿ ಬಿತ್ತರಿಸಲು ಬರೆದಿದ್ದು.
    ಐರಿಶ್ ಕವಿಗೆ ನಿಜವಾಗಿಯೂ ನಾವು ಧನ್ಯವಾದಗಳನ್ನು ತಿಳಿಸಲೇಬೇಕು... ನಮ್ಮ ಕರುನಾಡ ನಂದಾದೀಪ ನಮಗಾಗಿ ಉಳಿಸಿದರೆಂದೇಳಿದರೆ ತಪ್ಪಾಗಲಾರದು.
    ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  5. ನಗಿಸು,

    ಕುವೆಂಪು ಬಗ್ಗೆ ಉತ್ತಮ ವಿವರವನ್ನು ಕೊಟ್ಟಿದ್ದೀರಿ. ಅಭಿನಂದನೆಗಳು.

    ಪ್ರತ್ಯುತ್ತರಅಳಿಸಿ
  6. ಶಿವು ಸರ್,
    ಧನ್ಯವಾದಗಳು. ಈ ಮಹಾನ್ ವ್ಯಕ್ತಿಯ ಬಗ್ಗೆ ತಿಳಿದಿದ್ದು ನನಗೆ ಬಹಳ ಖುಷಿಕೊಟ್ಟಿದೆ.

    ಪ್ರತ್ಯುತ್ತರಅಳಿಸಿ
  7. Kannada naadina Vishwamaanavana bagge, chetanada bagge tilisida nanna gurugallada Shri K.C.Shivaareddiyarige hrutpoorvaka namanagalu

    ಪ್ರತ್ಯುತ್ತರಅಳಿಸಿ