ಗುರುವಾರ 29 ಡಿಸೆಂಬರ್ 2011

ಮಕ್ಕಳ ರಾಜ್ಯ


ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕ ಬಾಲ ಲೀಲೆಗಳು...


ಸೂರ್ಯ

ಊಲಲ್ಲಾ.. ಫೋಟೋ... (ಅಣ್ಣನ ಮಗ)
---------------


ಸೂರ್ಯನ ಜೊತೆ ಸಂದೀಪ್

ಏಏಏಏಏಏಏಏ ಅಲ್ಲ್ನೋಡು..
(ಅಣ್ಣಂದಿರ ಮಕ್ಕಳು)
----------

ಸೂರ್ಯನ ಜೊತೆ ಶಿವು
ಹೇ.. ಸರಿಯಾಗಿ ನಿಂತ್ಕೊಳ್ಳೋ..ಫೋಟೋ ತೆಗಿತಾರೆ..!!!
(ಅಣ್ಣನ ಮಕ್ಕಳು)
----------------


ಅಹಹ್ಹ...
----------


ಹುಫ್...
---------

ನನ್ನ ಈ ಸ್ಟೈಲ್ ನಲ್ಲಿ ಒಂದು ಫೋಟೋ ಪ್ಲೀಸ್..

---------------

ಚಿತ್ರಗಳು @ಮನಸು

ಸೋಮವಾರ 19 ಡಿಸೆಂಬರ್ 2011

ಕ್ಯಾಮರಾ ಕಣ್ಣೊಳಗೆ

 ಕರಿ ಹಸು ಬಿಳಿ ಕರು - ಬಣ್ಣ ಬೇರೆ ಪ್ರೀತಿ ಒಂದೇ
@ಚಿತ್ರ ಮನುವಚನ್

                                                 ಎಲ್ಲಿಹುದೋ ಮನೆ ಹುಡುಕ ಹೊರಟಿಹೆ...
@ಚಿತ್ರ ಮನಸು

ಶೇಖರಿಸಿಟ್ಟಿರುವೆ ಆಹಾರ ನನ್ನ ಕೂಸಿಗೆ ಉಣಬಡಿಸಲು
@ಚಿತ್ರ ಮನಸು

ಸುತ್ತ ಮುತ್ತ ನೋಡುವೆ ಯಾರಾದರು ಇರುವರೇನೋ
@ಚಿತ್ರ ಮನುವಚನ್

ಕಲ್ಲು ಬಂಡೆಯಾದರೇನೋ ನೆಡೆದಾಡ ಬಲ್ಲೆ ನಾನು
@ಚಿತ್ರ ಮನುವಚನ್

ರವಿವಾರ 15 ನವೆಂಬರ್ 2009

ಪ್ರಭಾತ್ ಕಲಾವಿದರು

ಹೆಸರೆ ಹೇಳುವಂತೆ ಬೆಳಗುವ ಕಲಾವಿದರೇ ಸರಿ....... ಕನ್ನಡ ಕಲೆಯನ್ನು ನಾಡಿನಾದ್ಯಂತ ಪಸರಿಸುತ್ತಿರುವ ಕಲಾವೃಂದಕ್ಕೆ ನಮ್ಮನಮನಗಳು ಇತ್ತೀಚೆಗಷ್ಟೆ ಕುವೈಟಿಗೆ ಆಗಮಿಸಿದ್ದ ಕಲಾವಿದರ ಬಗ್ಗೆ ನನಗೆ ಹೆಚ್ಚು ತಿಳಿದುಕೊಳ್ಳಬೇಕೆಂದು ಬಯಸಿ ಅಂತರ್ಜಾಲಕ್ಕೆ ಮೊರೆಹೋದೆ ಅಲ್ಲಿ ನಿಜಕ್ಕೊ ಅತಿ ಹೆಚ್ಚು ಮಾಹಿತಿಯೇ ದೊರೆಯಿತು.

೧೯೩೦ರಲ್ಲಿ ಪ್ರಾರಂಭಗೊಂಡ ಒಂದು ಕಲಾವೃಂದ ಹಲವು ನಾಟಕ, ನೃತ್ಯರೂಪಕಗಳಿಗೆ ಹೆಸರುವಾಸಿಯಾಗಿದ್ದರು. ಈ ಕಲಾವೃಂದವನ್ನು ಗೋಪಿನಾಥ್,ಕರಿಗಿರಿ,ಜೈಸಿಂಹ,ದ್ವಾರಕನಾಥ್ ಎಂಬ ಕಲಾತಪಸ್ವಿಗಳು ತಮ್ಮ ಕಲಾವೃಂದಕ್ಕೆ ಗುರುರಾಜ ವಾದ್ಯವೃಂದ ಮತ್ತು ನಾಟಕ ಮಂಡಳಿ ಎಂಬ ಹೆಸರನ್ನಿಟ್ಟರು. ಇವರು ನಾಟಕ ನೃತ್ಯ, ಹಾಡುಗಳು ಹಾಗೂ ಹರಿಕಥಾ ವಿಶೇಷತೆಗಳಲ್ಲೂ ಹೆಚ್ಚು ಒಲವಿತ್ತರು.ಮೊದಲು ತುಮಕೂರಿನಲ್ಲಿ ನೆಲೆಗೊಂಡಿದ್ದ ಕಲಾವಿದರು ಹೆಚ್ಚು ಪ್ರೇಕ್ಷಕರನ್ನು ಮನಸೆಳೆಯಲು ಬೆಂಗಳೂರಿಗೆ ಬಂದು ನೆಲೆಸಿದರು ಈ ತಂಡದ ಮೇಲ್ವಿಚಾರಕರಾಗಿ ಗೋಪಿನಾಥ್ ರವರು ತಮ್ಮ ತಂಡವನ್ನು ಮುನ್ನಡೆಸಿದರು. ೧೯೪೨ರಲ್ಲಿ ಪ್ರಭಾತ್ ಕಲಾವಿದರೆಂಬ ಹೆಸರಿಂದ ಮರುನಾಮಕರಣ ಮಾಡಿದರು. ಮೊಟ್ಟ ಮೊದಲು ಭಾರತೀಯ ಸಾಂಸ್ಕೃತಿಕ ನೃತ್ಯವನ್ನು ತಮ್ಮ ನಾಟಕಗಳಲ್ಲಿ ಅಳವಡಿಸಿದ ಹೆಗ್ಗಳಿಕೆಯೊ ಈ ಕಲಾವಿದರ ಪಾಲಾಗುತ್ತದೆ.

ಚಲನಚಿತ್ರ ಅಭಿನೇತ್ರಿಗಳಾದ ಸಿ.ಆರ್.ಸಿಂಹ, ಶ್ರೀನಾಥ್, ಮಂಜುಳ, ಲೋಕೇಶ್ ತಮ್ಮ ಕಲಾ ಜೀವನವನ್ನು ಪ್ರಾರಂಭಿಸಿದ್ದು ಇದೇ ಕಲಾವಿದರ ತಂಡದಿಂದ, ಇವರೆಲ್ಲ ಚಿತ್ರರಂಗದ ಹಾದಿಯಲ್ಲಿ ಬಹಳಷ್ಟು ಹೆಸರು ಮಾಡಿದ್ದಾರೆ. ಪ್ರಭಾತ್ ಕಲಾವಿದರು ತಮ್ಮ ನಾಟಕಗಳಲ್ಲಿ ಸುಮಾರು ೨೦ ನಾಟಕಗಳನ್ನು ಸಾದರಪಡಿಸಿದ್ದಾರೆ ಅವುಗಳಲ್ಲಿ ಕೆಲವು ಮೋಹಿನಿ ಬ್ರಹ್ಮಾಸುರ, ಕರ್ನಾಟಕ ವೈಭವ, ಕಿಂದರಿಜೋಗಿ,ರಾಮ ಪ್ರತಿಕ್ಷಾ,ಪುಣ್ಯಕೋಟಿ, ಧರ್ಮಭೊಮಿ, ದಶಾವತಾರ ಮುಂತಾದವುಗಳು. ಇಂತಹ ನೃತ್ಯರೂಪಕ ನಾಟಕ ಪ್ರಸ್ತುತ ಪಡಿಸುವುದು ಅತಿ ಸುಲಭದ ಮಾತಲ್ಲ ಅದಕ್ಕೆ ತಕ್ಕಂತ ವೇದಿಕೆ, ದೀಪಾಲಂಕಾರಗಳ ಪ್ರಭಾವ, ಹಿನ್ನೆಲೆ ಧ್ವನಿಗೆ ತಮ್ಮ ಮಾತು ಹೊಂದಾಣಿಕೆ, ಇವೆಲ್ಲವೂ ಬಲು ಕಷ್ಟದ ಕೆಲಸ ಅದಕ್ಕೆ ತಕ್ಕಂತ ಕಲಾವಿದರು ತಮ್ಮ ಶ್ರದ್ಧೆ ಒಲವೂ ಎಲ್ಲವನ್ನು ವಹಿಸಬೇಕಾಗುತ್ತದೆ. ಇಂತಹ ನೃತ್ಯರೂಪಕಗಳಿಗೆ ಸಾಹಿತ್ಯ,ಸಂಗೀತ ಜೋಡಣೆಗೆಂದೆ ಸಂಗೀತಸಾಹಿತ್ಯ ನಿರ್ಮಾಣಶಾಲೆಯನ್ನು ಪ್ರಭಾತ್ ಕಲಾವಿದರು ಹೊಂದಿದ್ದಾರೆ.ಇದೇ ಕಲಾವಿದರ ಅತಿ ಪ್ರಸಿದ್ಧ ನಾಟಕ ಸಿಂಡ್ರೆಲಾ ಈ ನಾಟಕವು ಸುಮಾರು ೧,೦೦೦ ಕ್ಕೊ ಹೆಚ್ಚು ಪ್ರದರ್ಶನಗೊಂಡಿರುವುದು ಅವರ ಕಲಾ ಪ್ರಬುದ್ಧತೆಯನ್ನು ಹಿಡಿದು ತೋರಿಸುತ್ತದೆ.

ಬರಿ ನಾಟಕ ನೃತ್ಯ ಇಷ್ಟಕ್ಕೆ ಮೀಸಲಿಡದೆ ತಮ್ಮ ವೃತ್ತಿಯನ್ನು ಉಡುಗೆ ತೊಡಿಗೆಗಳ ಬಾಡಿಗೆ ನೀಡುವಿಕೆ, ಸಂಗೀತ ಸಾಮಾಗ್ರಿಗಳು, ವೇದಿಕೆಗೆ ಬಳಸುವ ಸಾಮಗ್ರಿಗಳನ್ನು ಬಾಡಿಗೆಗೆ ನೀಡುತ್ತಲಿದ್ದಾರೆ, ನೃತ್ಯ ತರಬೇತಿಯನ್ನು ಸಹಾ ಹಲವು ಮಕ್ಕಳಿಗೆ ನೀಡುತ್ತಲಿದ್ದಾರೆ.

ಮತ್ತೊಂದು ವಿಶೇಷತೆ ಈ ಕಲಾಕುಟುಂಬದಲ್ಲಿದೆ ಅದೇನಂದರೆ ಅಮೇರಿಕಾ ಅಮೇರಿಕಾ ಖ್ಯಾತಿಯ ತಾರೆ ಹೇಮ ಪಂಚಮುಖಿ, ಹಾಗು ಚಲನಚಿತ್ರ ಹಾಗೂ ಕಿರುತೆರೆಯಲ್ಲಿ ಹೆಸರು ಮಾಡಿರುವ ಹರೀಶ್ ರವರು ಈ ಸಂಸ್ಥೆ ಸ್ಥಾಪಕರೊಬ್ಬರಾದ ಗೋಪಿನಾಥ್ ಅವರ ಮೊಮ್ಮಕ್ಕಳು ಇವರ ಸಾಧನೆಯೂ ಸಹ ಶ್ಲಾಂಘನೀಯ ಹೇಮರವರು ಹಲವು ಮಕ್ಕಳಿಗೆ ನೃತ್ಯ ತರಬೇತಿದಾರರಾಗಿ ಇಂದಿಗೂ ಕಾರ್ಯನಿರ್ವಹಿಸುತ್ತಲಿದ್ದಾರೆ ಮತ್ತು ಹರೀಶ್ ಹಾಗೂ ಅವರ ಪತ್ನಿ ಕಿರುತೆರೆ ಅತಿ ಮುಗ್ಥ, ಸೌಮ್ಯ ಸ್ವರೂಪಿ ದೀಪಶ್ರೀ ದಂಪತಿಗಳಿಬ್ಬರು ಈ ಪ್ರಭಾತ್ ಕಲಾವಿದರ ಬಳಗಕ್ಕೆ ಹೆಮ್ಮೆಯ ಗರಿಗಳಾಗಿದ್ದಾರೆ.

ತಮ್ಮ ಕುಟುಂಬವನ್ನೇ ಕಲಾವಂತಿಕೆಯಲ್ಲಿ ಮುಳುಗಿಸಿಕೊಂಡ ಈ ಮನೋಘ್ನ ಅಭಿನೇತ್ರಿಗಳೂಂದಿಗೆ ನಾವುಗಳು ಕಳೆದ ಸಮಯ ನಮ್ಮ ಜೀವನದ ಅತಿ ಸಂತಸದ ಸಮಯ ಹಾಗೂ ಅವರ ತರಬೇತಿ ಮೇರೆಗೆ ನಾವು ಕಲಿತ ಕಿಂದರಜೋಗಿ ನಾಟಕದ ಪುಟ್ಟ ಪಾತ್ರ ನಮಗೆ ಖುಷಿಕೊಟ್ಟಿದೆ. ಇನ್ನು ಉತ್ತಮವಾಗಿ ಮಾಡಬೇಕಿತ್ತೆಂಬ ಅಭಿಲಾಷೆಯು ಇದೆ.
ಒಂದು ವಾರ ದೀಪಶ್ರೀ ಹಾಗೂ ಹರೀಶ್ ಅವರೊಂದಿಗೆ ಕಳೆದ ದಿನಗಳು ನಿಜಕ್ಕೊ ಸಂತಸ ತರಿಸಿದೆ. ನಿಮ್ಮಿಬ್ಬರ ಶ್ರಮದಿಂದ ನಮ್ಮೆಲ್ಲರ ಪಾತ್ರಕ್ಕೆ ಕಳೆತರಿಸಿದೆಂದೇಳಿದರೆ ತಪ್ಪಾಗಲಾರದು.

ಹರೀಶ್ ಅವರು ನೀಡಿದ ರಾಮ,ವಿಷ್ಣು,ಕಿಂದರಜೋಗಿ ಮುಂತಾದವು..ಎಲ್ಲ ಪಾತ್ರಗಳನ್ನು ನಾವು ಕಣ್ಣಾರೆ ಕಂಡೆವು ಈ ಪಾತ್ರಗಳಿಗೆ ಕಿಂಚ್ಚಿತ್ತೂ ಕುತ್ತು ಬರದಹಾಗೆ ಆಯಾ ಪಾತ್ರಕ್ಕೆ ಕಳೆತುಂಬಿದ್ದರು.ಇನ್ನು ದೀಪಶ್ರೀರವರು ಪುಣ್ಯಕೋಟಿ ಪಾತ್ರದಲ್ಲಿ ತಾವೇ ಆ ಪುಣ್ಯಕೋಟಿಯೇನೋ ಎಂಬಂತೆ ಆ ಪಾತ್ರದಲ್ಲೇ ಐಕ್ಯರಾಗಿಬಿಟ್ಟಿದ್ದರು...ಅವರು ತಬ್ಬಲಿಕರುವಿನ ತಬ್ಬಿ ಮುದ್ದಾಡಿ ಇತರ ಹಸುಗಳಿಗೆ ಕಂದಮ್ಮನನ್ನು ನೀಡುವಾಗಿನ ದೃಶ್ಯ ಇಂದಿಗೂ ಕಣ್ಣುಕಟ್ಟಿದಂತಿದೆ...ಎಷ್ಟೋ ಮಂದಿ ಪ್ರೇಕ್ಷಕರು ತಾಯಿ ಮಗು ಅಗಲಿಕೆಗಾಗಿ ನೊಂದು ಕಣ್ಣೀರ ಸುರಿಸಿದ್ದು ಉಂಟು ಅಷ್ಟು ಮನೋಘ್ನ ಅಭಿನಯ ದೀಪಶ್ರೀರವರದು.ಇವರಿಬ್ಬರಷ್ಟೆ ಅಲ್ಲ ಅವರೊಂದಿಗೆ ಪಾತ್ರ ನಿರ್ವಹಿಸಿದ್ದ ಕಿಂದರಿಜೋಗಿಯ ಗೌಡ ಹಾಗೂ ಅಲೆಗ್ಸಾಂಡರ್ ಪಾತ್ರದಾರಿ, ಲಕ್ಷ್ಮಣ,ಜಟಾಯು,ಹುಲಿ, ಕೃಷ್ಣ, ಹಲವು ನೃತ್ಯ ಕಲಾವಿದರೂ ಎಲ್ಲರೂ ಅದೇನು ಅಭಿನಯ ಒಬ್ಬೂಬ್ಬ ಕಲಾವಿದರೂ ೩,೪ ಪಾತ್ರಧಾರಿಗಳಾಗಿ ತಮ್ಮ ತಮ್ಮ ಪಾತ್ರಕ್ಕೆ ಜೀವಕಳೆ ತುಂಬಿದರು.

ಹರೀಶ್, ದೀಪ ಹಾಗೂ ಎಲ್ಲಾ ಪಾತ್ರ ವೃಂದದವರಿಗೆ ನಮ್ಮ ನಮನಗಳು

ಮಂಗಳವಾರ 10 ನವೆಂಬರ್ 2009

ಕುವೆಂಪು – ಕುಪ್ಪಳ್ಳಿಯ ಗರಿ, ಕರ್ನಾಟಕದ ಸಿರಿ ಕನ್ನಡದ ಕಂಪು



ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು!!!! ಈ ಹಾಡು ಎಷ್ಟು ಜನರಿಗೆ ಗೊತ್ತಿಲ್ಲ ಹೇಳಿ? ಅದರಲ್ಲೂ ನಾವು ದೇಶ ಬಿಟ್ಟು ದೂರ ಇರುವವರು ಈ ಸಾಲುಗಳನ್ನು ಅರ್ಥೈಸಿಕೊಳ್ಳಲೇ ಬೇಕು ಅಲ್ಲವೆ!!! ಇತ್ತೀಚೆಗಷ್ಟೆ ಆ ಸಾಲುಗಳ ರುವಾರಿ ಮಹಾನ್ ಚೇತನ ನನ್ನ ನೆಚ್ಚಿನ ಕವಿಗಳಲ್ಲೊಬ್ಬರಾದ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪನವರ (ಕುವೆಂಪು) ಬಗ್ಗೆ ಹೆಚ್ಚು ತಿಳಿಯಲು ಡಾ. ಕೆ. ಸಿ ಶಿವಾರೆಡ್ಡಿರವರ ಯುಗದಕವಿ ಪುಸ್ತಕವನ್ನು ಓದುವಾಗ ಕುವೆಂಪುರವರಿಗೆ ಕನ್ನಡದತ್ತ ಒಲವು ಮೂಡಿದ್ದು ಹೇಗೆಂದು ತಿಳಿಯಿತು, ಹಾಗಂತ ಅವರು ಕನ್ನಡದ ಒಲವಿಲ್ಲವೆಂದಲ್ಲ ಕನ್ನಡವನ್ನೇ ಆರಾಧ್ಯದೈವನ್ನಾಗಿ ರೂಢಿಸಿಕೊಂಡ ಬಗೆ ಹೀಗಿದೆ ನೋಡಿ...

ಕುವೆಂಪುರವರು ತಮ್ಮ ಸಾಹಿತ್ಯಕೃಷಿಯನ್ನು ಮೊಟ್ಟಮೊದಲು ಮಾತೃಭಾಷೆಯಲ್ಲಿ ಹೆಚ್ಚು ಪ್ರಾರಂಭಿಸಿರಲಿಲ್ಲ, ಪರಭಾಷೆಯಾದ ಇಂಗ್ಲೀಷ್ ಭಾಷೆಯಲ್ಲಿ. ಅವರ ಒಲವು ಹೆಚ್ಚು ಇಂಗ್ಲೀಷ್ ಭಾಷೆಯತ್ತಲೇ ಇತ್ತು ಇಂತಹ ಸ್ಥಿತಿಯಲ್ಲಿ ಬದಲಾವಣೆಯ ಮನಸ್ಸು ಮೂಡಿಸಿದ ಒಂದು ಘಟನೆ ಕುವೆಂಪುರವರ ಜೀವನದಲ್ಲಿ ನೆಡೆದಿತ್ತು..

ಪುಟ್ಟಪ್ಪನವರು ಮೈಸೂರಿನ ತಮ್ಮ ವಿದ್ಯಾಭ್ಯಾಸ ಸಮಯದಲ್ಲಿ ಹಲವು ಇಂಗ್ಲೀಷ್ ಕವಿಗಳನ್ನು ಅನುಕರಿಸಿ ಬರೆದ ಕವನಗಳನ್ನು ತಮ್ಮ ಶಾಲಾವಾರ್ಷಿಕೋತ್ಸವ ಹಾಗೂ ಹಲವಾರು ಸಮಾರಂಭಗಳಲ್ಲಿ ಓದಿಹೇಳಿ ಗುರುಗಳು, ಸ್ನೇಹಿತರು, ಎಲ್ಲರಿಂದ ಬೇಷ್ ಎನಿಸಿಕೊಳ್ಳುತ್ತಿದ್ದರು, ಇಂತಹ ಪ್ರೋತ್ಸಾಹಕ್ಕೆ ಮಾರುಹೋದ ಪುಟ್ಟಪ್ಪನವರು ಇಂಗ್ಲೀಷ್ ಕವನಗಳ ರಚನೆಯನ್ನೇ ಮುಂದುವರಿಸಿದರು. ತಾವು ಎಸ್.ಎಸ್.ಎಲ್.ಸಿ ಓದುತ್ತಿರುವಾಗ (೧೯೨೨) "ಬಿಗಿನರ್ಸ್ ಮ್ಯೂಸ್" ಎಂಬ ಕವನ ಸಂಕಲವನ್ನು ಪ್ರಕಟಿಸಿದ್ದರು. ತಮ್ಮ ಬರವಣಿಗೆಯಿಂದ ಫಲಿಸಿದ ಪ್ರೋತ್ಸಾಹದ ಕಾರಣ ಹೆಚ್ಚು ಇಂಗ್ಲೀಷ್ ಕವನಗಳನ್ನು ರಚಿಸುವತ್ತ ವಾಲಿದರು. ಇದೇ ಸಂದರ್ಭದಲ್ಲಿ ಮೈಸೂರಿಗೆ ಆಗಮಿಸಿದ್ದ ಪ್ರಸಿದ್ಧ ಐರಿಷ್ ಕವಿ ಜೇಮ್ಸ್ ಎಚ್. ಕಸಿನ್ಸ್ ಅವರನ್ನು ಭೇಟಿ ಮಾಡಿ ತಾವು ಬರೆದಿದ್ದ ಕವನಗಳನ್ನು ಅವರಿಗೆ ತೋರಿಸಿದರು, ಕಸಿನ್ಸ್ ರವರು ಪುಟ್ಟಪ್ಪನವರು ಕೊಟ್ಟ ಹಾಳೆಗಳನ್ನು ತಿರುವಿಸಿ ನೋಡಿ ಖಾದಿ ತೊಟ್ಟು ನಿಂತಿದ್ದ ಪುಟ್ಟಪ್ಪನವರತ್ತ ಒಮ್ಮೆ ನೋಡಿದರು.

ಅಸಮಾಧಾನದ ಧ್ವನಿಯಲ್ಲೇ "ಏನಿದೆಲ್ಲ ಕಗ್ಗ ?" (What is all this stuff?)"

"ನಿಮ್ಮ ಮೈಮೇಲೆ ನೋಡಿದರೆ ತಲೆಯಿಂದ ಕಾಲಿನವರೆಗೂ ಸ್ವದೇಶೀ ವಸ್ತುಗಳೇ ಕಾಣುತ್ತಿವೆ !. ಇದು ಮಾತ್ರ ಸ್ವದೇಶಿಯಲ್ಲ !!. ನಿಮ್ಮ ಭಾಷೆಯಲ್ಲಿ ಏನಾದರೂ ಬರೆದಿದ್ದೀರಾ?'' ಎಂದರಂತೆ.
ಅವರ ಇಂಗ್ಲಿಷ್ ಕವನಗಳನ್ನು ನೋಡಿ, ಇತರ ತನ್ನ ಭಾರತೀಯ ಮಿತ್ರರೂ ಅಧ್ಯಾಪಕರೂ ಶ್ಲಾಘಿಸಿದ್ದಂತೆ, ಅವರೂ ಅವುಗಳನ್ನು ಮೆಚ್ಚಿ ಹೊಗಳುತ್ತಾರೆ ಎಂದು ಆಸೆಪಟ್ಟಿದ್ದ ಪುಟ್ಟಪ್ಪನವರಿಗೆ ತುಂಬಾ ನಿರಾಶೆಯಾಯಿತು. ಅವರು ಕನ್ನಡದಲ್ಲಿ ಆಗಲೇ `ಅಮಲನ ಕಥೆ' ಮತ್ತು ಇತರ ಒಂದೆರಡು ಕವನ ಬರೆಯುವ ಪ್ರಯತ್ನವನ್ನೂ ಮಾಡಿದ್ದರಾದರೂ ಅವರ ಪ್ರಶ್ನೆಗೆ ಮರೆತವರಂತೆ ಇಲ್ಲ ಎಂದು ಉತ್ತರಿಸಿದರಂತೆ.

ಬಂಗಾಳಿ ಭಾಷೆಯಲ್ಲಿ ರವೀಂದ್ರನಾಥ ಠಾಗೂರರು ಬಂದರು. ಹೊಸ ಹೊಸ ರೀತಿಯಲ್ಲಿ ಬರೆದರು. ಹೊಸ ಛಂದಸ್ಸುಗಳನ್ನು ಕಂಡುಹಿಡಿದರು. ಅವರಿಗೆ ನೊಬೆಲ್ ಬಹುಮಾನವೂ ಬಂದಿತು! ಹಾಗೆಯೆ ನೀವು ಹೊಸ ಹೊಸ ಛಂದಸ್ಸುಗಳನ್ನು ಕಂಡುಹಿಡಿದು, ಹೊಸ ಹೊಸ ಪದಗಳನ್ನು ಪದಪ್ರಯೋಗಗಳನ್ನು ಸಾಧಿಸಿ, ಬಂಗಾಳಿ ಭಾಷೆಯಲ್ಲಿ ರವೀಂದ್ರನಾಥ ಠಾಗೊರರು ಸಾಹಿತ್ಯ ಲೋಕದಲ್ಲಿ ಸೃಜನತೆಯನ್ನು ಸೃಷ್ಠಿಸಿದ್ದಾರೆ. ಅವರ ಹಲವು ಕವನಗಳನ್ನು ಇಂಗ್ಲೀಷ್ ಭಾಷೆಗೆ ಭಾಷಾಂತರವೂ ಆಗಿದೆ.ನೀವು ನಿಮ್ಮ ಭಾಷೆಯಲ್ಲಿ ಸೃಜನ ಸಾಹಿತ್ಯ ಸೃಷ್ಟಿಸಬಹುದು, ಅಲ್ಲದೆ ಕವಿತೆಯಲ್ಲಿ ಉತ್ತಮ ಸೃಜನ ಸಾಹಿತ್ಯ ಯಾರಿಗೂ ಪರಭಾಷೆಯಲ್ಲಿ ಸಾಧ್ಯವಿಲ್ಲವೆಂದರಂತೆ, ಕೊನೆಗೆ ಕೆಲವು ವಿವೇಕದ ಮಾತನಾಡಿ ಹಸ್ತಪ್ರತಿಯನ್ನು ಪುಟ್ಟಪ್ಪನವರಿಗೆ ಕೊಟ್ಟರಂತೆ. ಕಸಿನ್ಸ್ ಅವರ ಹಿತವಚನದಂತೆ ತನ್ನ ಭಾಷೆಯಾದ ಕನ್ನಡದಲ್ಲಿಯೇ ಬರೆದರೆ ಉತ್ತಮ ಎಂದು ತಿಳಿದು ಹಾಗೂ ಅಂದಿನಿಂದ ಕನ್ನಡದಲ್ಲಿ ಕಾವ್ಯ ರಚಿಸುವ ಸಂಕಲ್ಪ ಪುಟ್ಟಪ್ಪನವರದಾಯಿತು. ಅವರೇ ಹೇಳಿದಂತೆ `ಇದೊಂದು ಐತಿಹಾಸಿಕ ಘಟನೆ'.

ಒಬ್ಬ ಪ್ರಖ್ಯಾತ ವ್ಯಕ್ತಿಯ ಸಾಧನೆ ಹಾಗು ಹೆಸರಿನ ಹಿಂದೆ ಯಾವುದಾದರೊಂದು ಅವಿಸ್ಮರಣೀಯ ಘಟನೆ ಇದ್ದೇ ಇರುತ್ತೆಂಬುದಕ್ಕೆ ಪುಟ್ಟಪ್ಪನವರ ಘಟನೆಯೇ ಒಂದು ಉದಾಹರಣೆ.

ಈ ಘಟನೆಯ ಪ್ರಭಾವದಿಂದಲೇ ಅವರ ಮೊದಲ ಕನ್ನಡ ಕವಿತೆ "ಪೊವು" ರಚನೆಯಾಯಿತು. ತದನಂತರ ತಮ್ಮ ಕಾವ್ಯ ಜೀವನವನ್ನು ಕನ್ನಡದಲ್ಲಿ ಆಧ್ಯಾತ್ಮತೆಯನ್ನು ಮೂಡಿಸಿದರು.
ನಂತರದ ದಿನಗಳಲ್ಲಿ "ಮೋಡಣ್ಣನ ತಮ್ಮ", `ಹಾಳೂರು', `ಬೊಮ್ಮನಹಳ್ಳಿಯ ಕಿಂದರಿ ಜೋಗಿ' ಮುಂದಾದ ಕೃತಿಗಳು ಹೊರಬಂದವು. ಇದೆ ಸಮಯಕ್ಕೆ ಸರಿಯಾಗಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರ ವಿದ್ಯಾರ್ಥಿಯಾಗುವ ಬದಲು ಪುಟ್ಟಪ್ಪನವರು ಕನ್ನಡ ಎಂ. ಎ ಮಾಡಲು ಸೇರಿದರು.

ತಮ್ಮ ವಿದ್ಯಾಭ್ಯಾಸದ ಸಮಯದಲ್ಲೇ "ಜಲಗಾರ" ನಾಟಕದ ರಚನೆಯಾಯಿತು ಆನಂತರದ ದಿನಗಳಲ್ಲಿ `ಯಮನಸೋಲು', `ಬೆರಳ್ಗೆ ಕೊರಳ್', `ಸ್ಮಶಾನ ಕುರುಕ್ಷೇತ್ರಂ' ಹೀಗೆ ಹಲವು ನಾಟಕಗಳು ಹೊರಬಂದವು. ಆನಂತರದ ದಿನಗಳಲ್ಲಿ ಕನ್ನಡ ಬೆಳಗಲು `ಕಿರಿಯ ಕಾಣಿಕೆ' `ತಳಿರು' ಕವನಸಂಕಲನಗಳು ಪ್ರಕಟವಾದವು. ಇದರೊಂದಿಗೆ `ನನ್ನ ಗೋಪಾಲ', `ಸಂನ್ಯಾಸಿ ಮತ್ತು ಇತರ ಕಥೆಗಳು' ಈ ಕವನ,ಕಥೆ, ನಾಟಕ ಕೃತಿಗಳೆಲ್ಲವೂ ಒಂದಾದನಂತರ ಒಂದಂತೆ ಕನ್ನಡಿಗರ ಮನೆಮನಗಳಿಗೆ ತಲುಪಿತು ಈ ಕೃತಿಗಳು ಪ್ರಕಟವಾಗುವಷ್ಟರಲ್ಲಿ ಪುಟ್ಟಪ್ಪನವರು ಕನ್ನಡ ಎಂ. ಎ ಮುಗಿಸಿ ಮಹಾರಾಜಾ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇರಿಕೊಂಡರು. ತದನಂತರದ ದಿನಗಳಲ್ಲಿ ತಮ್ಮ ಜೀವನವನ್ನು ಕನ್ನಡದ ಏಳ್ಗೆಗೆ ಕನ್ನಡ ನಾಡಿನ ಜನರ ಮನದಲ್ಲಿ ಕನ್ನಡತ್ವವನ್ನು ಮೂಡಿಸಿದ "ಜೈ ಭಾರತ ಜನನಿಯ ತನುಜಾತೆ", "ಕನ್ನಡ ಎನೆ ಕುಣಿದಾಡುವುದೆನ್ನೆದೆ", ಎಲ್ಲಾದರೂ ಇರು ಎಂತಾದರೂ ಇರು, ಬಾರಿಸು ಕನ್ನಡ ಡಿಂಡಿಮವ" "ಸಾಯುತಿದೆ ನಿಮ್ಮ ನುಡಿ ಓ ಕನ್ನಡ ಕಂದರಿರಾ" ಮೊದಲಾದ ಪ್ರಸಿದ್ಧ ಕವನಗಳ ಮೂಲಕ ಕನ್ನಡಿಗರಲ್ಲಿ ನುಡಿಯೊಲವು ಮೂಡಿಸಿದ ಮಹಾನ್ ಚೇತನ ನಮ್ಮ ಪುಟ್ಟಪ್ಪನವರು. ಸತ್ತಂತಿಹರನು ಬಡಿದೆಚ್ಚರಿಸಿದ ಸಾಹಸ ಅವರದು... ಕನ್ನಡಕ್ಕಾಗಿ ಕನ್ನಡ ನುಡಿ ಬಗೆಗೆ ಭಾವವ್ಯಂಜಕ ಕವಿತೆಗಳನ್ನು ಬರೆದಿದ್ದಾರೆಂದು ಹೇಳಿದರೆ ತಪ್ಪಾಗಲಾರದು.
೧೯೫೫ ರಲ್ಲಿ ಶ್ರೀರಾಮಾಯಣ ದರ್ಶನಂ ಮಹಾಕಾವ್ಯಕ್ಕೆ (ಕನ್ನಡಕ್ಕೆ ಮೊದಲಿಗೆ) ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಯಿತು. ಇದೇ ವರ್ಷ ಮಹಾರಾಜಾ ಕಾಲೇಜಿನ ಪ್ರಿನ್ಸಿಪಾಲರಾಗಿ ನೇಮಕಗೊಂಡರು. ೩೩ನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮೈಸೂರು ವಿಶ್ವವಿದ್ಯಾಲಯದ ಆಶ್ರಯದಲ್ಲಿ ಈ ಕಾಲಮಾನದಲ್ಲಿ ಸಂಯೋಜಿಸಿದ ಕೀರ್ತಿ ಪುಟ್ಟಪ್ಪನವರಿಗೆ ಸೇರುತ್ತದೆ. ೧೯೫೬ ರಲ್ಲಿ ಮೈಸೂರು ವಿಶ್ವವಿದ್ಯಾಲಯ ಗೌರವ ಡಿ. ಲಿಟ್. ಪ್ರಶಸ್ತಿಯನ್ನು ಪ್ರದಾನ ಮಾಡಿತು. ಇದೇ ವರ್ಷದಲ್ಲಿ ಕರ್ನಾಟಕ ಸರಕಾರ ಪುಟ್ಟಪ್ಪನವರನ್ನು ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ನೇಮಿಸಿತು.
ಪುಟ್ಟಪ್ಪನವರು ಉಪಕುಲಪತಿ ಹುದ್ದೆಯನ್ನು ಸ್ವೀಕರಿಸಿದ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಅನೇಕಸಮಸ್ಯೆಗಳನ್ನು ನಿವಾರಿಸಿದರು ವಿಶ್ವವಿದ್ಯಾಲಯದಲ್ಲಿ ಕನ್ನಡ ಮಾಧ್ಯಮವನ್ನು ಜಾರಿಗೆ ತಂದುದು ಮತ್ತು ಸ್ನಾತಕೋತ್ತರ ಶಿಕ್ಷಣ, ಸಂಶೋಧನೆಗಳಿಗಾಗಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಕುವೆಂಪುರವರು ಕಥೆ, ಕವನ, ಕಾವ್ಯಗಳ ರೂಪದಲ್ಲೇ ಅಲ್ಲದೆ ಕನ್ನಡದ ಉದ್ಧಾರವನ್ನು ಅಖಂಡ ಕರ್ನಾಟಕ ಸ್ಥಾಪನೆ, ಎಲ್ಲ ಹಂತಗಳಲ್ಲಿ ಜನಪರವಾದ ಕನ್ನಡದಲ್ಲಿ ಆಡಳಿತ, ಶಿಕ್ಷಣದ ಎಲ್ಲ ಹಂತಗಳು ಕನ್ನಡ ಮಾಧ್ಯಮದಲ್ಲಿ ಅಳವಡಿಸಿದರು ಹಾಗೂ ಕನ್ನಡದಲ್ಲೇ ಅಧ್ಯಯನ ಶೀಲರಿಗೆ ಉಪಯುಕ್ತವಾಗುವಂತೆ ಪಠ್ಯಪುಸ್ತಕಗಳ ರಚನೆಯತ್ತ ಮುಖಮಾಡಿದರು. ಕನ್ನಡಕಟ್ಟುವ ಕೆಲಸದಲ್ಲಿ ಕುವೆಂಪುರವರದು ಮುಖ್ಯಪಾತ್ರ. ಮೈಸೂರು ವಿಶ್ವವಿದ್ಯಾಲಯದ ಮೊದಲ ಕನ್ನಡಿಗ ಕನ್ನಡ ಪ್ರಾಧ್ಯಪಕ ಕುಲಪತಿಯಾಗಿ "ಮಾನಸ ಗಂಗೋತ್ರಿ" ಯನ್ನು ರೂಪಿಸಿ, ಬೋಧನೆ, ಸಂಶೋಧನೆ, ಪ್ರಸಾರ ಎಂಬ ಮುಮ್ಮುಖದ ಆಯಾಮ ನೀಡಿದರು. ಪ್ರಜೆಗಳಿಂದ ರೂಪುಗೊಂಡ ವಿಶ್ವವಿದ್ಯಾಲಯದಿಂದ ಶ್ರೀಸಾಮಾನ್ಯರಿಗೆ ಅನುಕೂಲಕರವಾಗುವಂತೆ ವಿವಿಧ ವಿಷಯಗಳಲ್ಲಿ ವಿದ್ವಾಂಸರ ಉಪನ್ಯಾಸಗಳನ್ನು ಏರ್ಪಡಿಸಿ ಅಭೂತಪೂರ್ವ ಗ್ರಂಥಗಳನ್ನು ಪ್ರಕಟಿಸಿದರು.
ಕನ್ನಡ ನಾಡು ನುಡಿಗಳ ಬಗ್ಗೆ ಕುವೆಂಪು ಎಷ್ಟು ಅಭಿಮಾನವಿಟ್ಟಿದ್ದರೋ ಅಷ್ಟೇ ಅಭಿಮಾನವನ್ನು ಅವರು ಇಂಗ್ಲೀಷ್ ಭಾಷೆಯನ್ನು ಅಷ್ಟೇ ಇಷ್ಟಪಡುತ್ತಿದ್ದರು. ಭಾಷೆಗಳ ಕಲಿಕೆ-ಭೋಧನೆ ಹಾಗು ಬಳಕೆಗೆ ಸಂಬಂಧಿಸಿದ ವಾಗ್ವಾದಗಳಲ್ಲಿ ಕುವೆಂಪು ಭಾಷೆ ಯಾರಿಗೆ, ಏಕೆ ಎಷ್ಟು ಎಂಬ ಪ್ರಶ್ನೆಗಳನ್ನು ವಿಚಾರಕ್ಕಿಡುತ್ತಾರೆ.ಶಾಲಾ ಹಂತದಲ್ಲಿ ಮೂರು ಭಾಷೆಗಳನ್ನು ಕಡ್ಡಾಯ ಅಥವಾ ಒಂದನೆ ತರಗತಿಯಿಂದ ಇಂಗ್ಲೀಷ್ ಕಲಿಯುವುದರಿಂದ ಪರಿಸ್ಥಿತಿ ಸುಧಾರಿಸುವುದಿಲ್ಲ, ಶಾಲಾದಿನಗಳಲ್ಲಿ ಮೂರು ಭಾಷೆಗಳನ್ನು ಹತ್ತು ಹಲವು ವರ್ಷ ಕಲಿತರೂ ನಾವು ಅವುಗಳ ಮರ್ಮವನ್ನು, ಹೃದಯವನ್ನು ಅರಿತಿಲ್ಲ ಕೇವಲ ಸಿಪ್ಪೆ ಸುಲಿಯುವುದರಲ್ಲೇ ಸುಸ್ತು ಹೊಡೆದಿದ್ದೇವೆಂದು ಹೇಳಿದ್ದಾರೆ.ಅಂತೆಯೇ ಕನ್ನಡಪರ ಹೋರಾಟ ಬರೀ ಬೀದಿಕೂಗಾಗದೇ ಕನ್ನಡತನವನ್ನು ಕಾರ್ಯಗಳಲ್ಲಿ ತೊಡಗಿಸಿದರೆ ಒಳಿತು ಎಂದು ಹೇಳುತ್ತಾರೆ.

ಕುವೆಂಪುರವರಿಗೆ ೧೯೫೭ ರಲ್ಲಿ ಧಾರವಾಡದಲ್ಲಿ ನಡೆದ ೩೯ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಪುಟ್ಟಪ್ಪನವರು ಆಯ್ಕೆಯಾದರು. ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಸೇವೆಗಾಗಿ ೧೯೫೮ ಜನವರಿ ೨೬ ರಂದು ಕೇಂದ್ರ ಸರ್ಕಾರದ ಪರವಾಗಿ ರಾಷ್ಟ್ರಪತಿಗಳು `ಪದ್ಮಭೂಷಣ' ಪ್ರಶಸ್ತಿಯನ್ನು ನೀಡಿ ಗೌರವ ಸಲ್ಲಿಸಿದರು.

೧೯೬೧ ಡಿಸೆಂಬರ್ ತಿಂಗಳಲ್ಲಿ ಮೈಸೂರಿಗೆ ಬಂದಿದ್ದ ಡಾ. ರಾಮಮನೋಹರ ಲೋಹಿಯಾ ಅವರು ಪುಟ್ಟಪ್ಪನವರನ್ನು ಭೇಟಿ ಮಾಡಿದರು. ೧೯೬೩ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಸನ್ಮಾನಿಸಿತು. ಕರ್ನಾಟಕ ಸರ್ಕಾರ ೧೯೬೪ ರಲ್ಲಿ ಪುಟ್ಟಪ್ಪನವರಿಗೆ `ರಾಷ್ಟ್ರಕವಿ' ಪ್ರಶಸ್ತಿಯನ್ನು ನೀಡಿ ಗೌರವಿಸಿತು.

೧೯೬೮ರಲ್ಲಿ ಭಾರತದ ಅತ್ಯುನ್ನತ ಸಾಹಿತ್ಯಕ್ಕೆ ಮೀಸಲಾದ ಜ್ಞಾನಪೀಠ ಪ್ರಶಸ್ತಿಯು ಪುಟ್ಟಪ್ಪನವರಿಗೆ ದೊರೆಯಿತು. ಕನ್ನಡಕ್ಕೆ ಮೊದಲ `ಜ್ಞಾನಪೀಠ'ವನ್ನು ತಂದುಕೊಟ್ಟ ಕೀರ್ತಿ ಅವರದು. ಹಾಗೆಯೇ ಮೊದಲ `ಪಂಪ ಪ್ರಶಸ್ತಿ'ಯನ್ನೂ (೧೯೮೮) ಹಾಗೂ ಮೊದಲ `ಕರ್ನಾಟಕ ರತ್ನ' ಪ್ರಶಸ್ತಿಯನ್ನೂ (೧೯೯೨) ಕರ್ನಾಟಕ ಸರ್ಕಾರ ಸಲ್ಲಿಸಿತು. ಹಂಪಿ ಕನ್ನಡ ವಿಶ್ವವಿದ್ಯಾಲಯವು ೧೯೯೫ ರಲ್ಲಿ ಪುಟ್ಟಪ್ಪನವರಿಗೆ `ನಾಡೋಜ' ಪ್ರಶಸ್ತಿಯನ್ನು ಪ್ರಕಟಿಸಿತು. ಆದರೆ ಅದನ್ನು ಪ್ರದಾನ ಮಾಡುವವರೆಗೆ ಅವರು ಉಳಿಯಲಿಲ್ಲ. ಅನಂತರ ಅದನ್ನು ಮರಣೋತ್ತರವಾಗಿ 'ನಾಡೋಜ' ಪ್ರಶಸ್ತಿಯನ್ನು ನೀಡುವ ಮೂಲಕ ಕವಿಸ್ಮರಣೆ ಮಾಡಿ ಗೌರವ ಸೂಚಿಸಲಾಯಿತು. ೧೯೯೪ ನವೆಂಬರ್ ತಿಂಗಳ ೧೦ ರಂದು ರಾತ್ರಿ ೧ ಗಂಟೆಗೆ ಕುವೆಂಪು ಅವರು ನಿಧನರಾದರು. ಅಂದರೆ ೧೯೯೪ ನವೆಂಬರ್ ೧೧ ರ ರಾತ್ರಿ ಬೆಳಗಿನ ಜಾವ ಈ ಶತಮಾನದ ಕವಿಚೇತನಕ್ಕೆ ಕನ್ನಡ ಜನತೆ ಗೌರವ ಶ್ರದ್ಧಾಂಜಲಿಯನ್ನು ಸಲ್ಲಿಸಿತು.
ಐರಿಶ್ ಕವಿ ಜೇಮ್ಸ್ ಕಸಿನ್ಸ್ ಮುಖಾಂತರ ಕನ್ನಡ ದೀಕ್ಷೆ ತೊಟ್ಟ, ಕಂಕಣ ಕಟ್ಟಿದ ಕವಿ ಕುವೆಂಪು ಅವರ ಅಭಿಮಾನದ ಹಾದಿ ಅನಿಕೇತನವೆಂದು ನಾವು ತಿಳಿದಿರಬೇಕು. ಕನ್ನಡ ನಾಡು ನುಡಿ ಇರುವವರೆಗೆ ಕುವೆಂಪುರವರ ಹೆಸರು, ನಡೆ ನುಡಿ ಆದರ್ಶ ಎಲ್ಲವೊ ರಾಜಿಸುತ್ತಲೇ ಇರುತ್ತದೆ. ಅಂಧತೆಯ ದೇಗುಲವನ್ನು ದಿಕ್ಕರಿಸಿ, ಮನೆಯನೆಂದೊ ಕಟ್ಟದಿರು ಕೊನೆಯನೆಂದೊ ಮುಟ್ಟದಿರು ಎಂದು ಭೋದಿಸಿದ ಕುವೆಂಪು ಅವರಿಗೆ ಸ್ಮಾರಕ, ಕಾಣಿಕೆ ಇತ್ಯಾದಿಗಳ ಅಗತ್ಯವಿಲ್ಲ. ಇಂತಹ ಮಹಾನ್ ಚೇತರನ್ನು ಪಡೆದ ನಾವುಗಳೇ ಧನ್ಯರು. ಈ ಮಹಾನ್ ಚೇತನರಿಗೆ ನಮ್ಮ ಹೃದಯಪೂರ್ವಕ ನಮನಗಳು.

ಬುಧವಾರ 16 ಸಪ್ಟೆಂಬರ್ 2009

ಮನತಣಿಸುವ ಸ್ಥಳ

ಕನಕಪುರ ಹತ್ತಿರವಿರುವ ರವಿಶಂಕರ್ ಗುರುಜಿ ಆಶ್ರಮದತ್ತ ಒಂದು ನೋಟ


ಪ್ರಶಾಂತತೆಯನ್ನು ಬೀರುವ ಸುತ್ತಲ ಪರಿಸರ






ಪ್ರಾರ್ಥನಾ ಮಂದಿರ

ಬುಧವಾರ 20 ಮೆ 2009

ಊರು ಉಪಕಾರ ಅರಿಯದು;ಹೆಣ ಸಿಂಗಾರ ಅರಿಯದು:

ಒಂದೊಂದು ಗಾದೆಯ ಹಿಂದೆ ಅನುಭವದ ದೃಷ್ಟಾಂತವಿರುತ್ತದೆ. ಊರು ಉಪಕಾರ ಅರಿಯದು; ಹೆಣ ಸಿಂಗಾರ ಅರಿಯದು ಎಂಬ ಗಾದೆ ಮಾತಿನಲ್ಲಿ ಅಡಗಿದ ಅರ್ಥ ಮಾರ್ಮಿಕವಾದುದು. ಊರು ಅಂದರೆ ಜನಸಮೂಹ. ಒಬ್ಬ ಅಪಾರ ಉದಾರ, ದಾನ, ಧರ್ಮ ಈ ಸ್ವಭಾವದ ವ್ಯಕ್ತಿಯು ನಿಸ್ವಾರ್ಥತೆಯಿಂದ ಪರೋಪಕಾರವನ್ನು ಮಾಡುತ್ತಿದ್ದ. ಅವನು ಒಬ್ಬಿಬ್ಬ ವ್ಯಕ್ತಿಗೆ ಸಹಾಯ ಮಾಡುತ್ತಿರಲಿಲ್ಲ, ಇಡಿ ಜನಸಮೂಹಕ್ಕೆ ಉಪಕಾರ ಮಾಡುತ್ತಿದ್ದ. ಉಪಕಾರಕ್ಕೆ ಪ್ರತಿಯಾಗಿ ಅವನೇನೂ ಫಲ ಆಗಲಿ ಸಹಾಯ ಹಸ್ತವನ್ನಾಗಲಿ ಬಯಸಿದವನಲ್ಲ. ಕೊನೆ ಕೊನೆಯಲ್ಲಿ ಎಲ್ಲರಂತೆ ಅವನೂ ಸಹ ವಯೋಮಾನದಿಂದ ಮುದುಕನಾಗಿ ಅಸಹಾಯಕ ವ್ಯಕ್ತಿಯಾಗಿ ಬಿಟ್ಟ. ಉಪಕಾರ ಮಾಡುವ ಶಕ್ತಿ, ಯುಕ್ತಿಯಾಗಲಿ ಅವನಿಗಿರಲಿಲ್ಲ ಎಲ್ಲವು ನಶಿಸಿದ ಜೀವ ಅಶಕ್ತನಾಗಿದ್ದ. ಅಸಹಾಯಕನೊ, ಅಶಕ್ತನೂ ಆಗಿರುವ ಆತ ಇನ್ನೊಬ್ಬರ ಸಹಾಯ, ನೆರವು, ಬೆಂಬಲ ಬಯಸಿದಾಗ ಯಾರು ಅವನತ್ತ ತಿರುಗಿ ನೋಡದಾದರು!! ಊರು ಅವನನ್ನು ಮರೆತಿದೆ. ಅವನ ಕಾಲದಲ್ಲಿ ಉಪಕೃತರಾದವರು ತೀರಿಕೊಂಡಿದ್ದಾರೆ. ಬದುಕಿ ಉಳಿದವರಿಗೆ ಅವನ ನೆನಪು ಮಾಸಿದೆ. ಇದು, ಸಾಮೂಹಿಕವಾಗಿ ಉಪಕಾರ ಮಾಡಿದವನಿಗೆ ಸಿಕ್ಕ ಪುರಸ್ಕಾರ ಅಥವಾ ಫಲ!

ಈ ಮೇಲಿನ ಅನುಭವಕ್ಕೆ ಉಪಮೆಯವಾಗಿ ಬಂದಿರುವ ಮಾತು ಹೆಣ ಸಿಂಗಾರವರಿಯದು ಎಂಬುದು. ನಿರ್ಜೀವ ದೇಹವನ್ನು ಎಷ್ಟೇ ಅಲಂಕರಿಸಿದರೂ ಸತ್ತ ವ್ಯಕ್ತಿಗೆ ಧನ್ಯತಾಭಾವ ಹುಟ್ಟಲಾರದು!! ಹೆಣಕ್ಕೆ ಸಿಂಗಾರ ವ್ಯರ್ಥ ಅದೇ ರೀತಿ ಊರಿಗೆ ಉಪಕರಿಸಲು ಹೊರಟರೆ ವ್ಯರ್ಥ ಪರಿಣಾಮ ಎಂಬುದು ಲೋಕಾನುಭವ. ಈ ಗಾದೆ ಮಾತಿನ ನೀತಿಯೆಂದರೆ, ಉಪಕಾರ ಮಾಡುವಾಗ ಯೋಗ್ಯರಿಗೆ ಮಾಡಬೇಕು, ಉಪಕೃತಿಯ ಪ್ರಜ್ಞೆ, ನೆನಪು, ಉಳ್ಳವರಿಗೆ ಮಾಡಬೇಕು. ಈ ಎಚ್ಚರ ಇರದಿದ್ದರೆ ಉಪಕಾರ ಬುದ್ಧಿಗೆ ಬೆಲೆಯಿಲ್ಲ ಅಥವಾ ನೆಲೆಯಿಲ್ಲ. ಕಿರಿಯರಿಗೆ ಹಿರಿಯರು ಸೂಚಾರ್ಥ್ಯದಲ್ಲಿ ನೀಡಿದ ಶಿಕ್ಷಣವೆಂದರೆ ಗಾದೆಗಳ ಪ್ರಯೋಗ.

ಸೋಮವಾರ 11 ಮೆ 2009

ಇಂದಿನ ಸೋಲು ನಾಳಿನ ಗೆಲುವು

ಜೀವನದ ಕಹಿ ಅನುಭವ ನಮ್ಮ, ನಡೆ, ನುಡಿ, ಬಾಳ್ವೆ ಎಲ್ಲವನು ತಿದ್ದಲು ಬಹಳ ಮಹತ್ವದ ಪಾತ್ರವಹಿಸಿದೆ. ಸಿರಿವಂತಿಕೆಯಲ್ಲೇ ಜೀವನ ಸಾಗಿಸಿದೊಡೆ ಬಡತನದ ಅರಿವು ಮೂಡುವುದೆಂತು, ಬಡತನದ ಬೇಗೆಯಲಿ ನೊಂದು ಬೆಂದವ ಸಿರಿವಂತನಾದೊಡೆ ತನ್ನ ಜೀವನದ ಏರುಪೇರಿನ ಮೆಟ್ಟಿಲುಗಳನ್ನು ಇಂಚಿಚಾಗಿ ಅರಿತಿರಬಲ್ಲ, ತನ್ನೆಲ್ಲಾ ಮಜಲುಗಳು ಸಿರಿತನಕ್ಕೆ ನಾಂದಿಯಾಗಿರುವುದೆಂದು ಬಯಸಿ ಸಿರಿತನದಲ್ಲೂ ಬಡತನದ ಸಂಪತ್ತನ್ನು ನೆನೆದು ಜೀವನದಲಿ ತಗ್ಗಿ ಬಗ್ಗಿ ನೆಡೆಯ ಬಲ್ಲ ಅಂತೆಯೇ ಸೋಲುಂಡವ ಎಂದೂ ಗೆಲುವು ಕಾಣಲಾರ, ಸೋಲೇ ತನ್ನ ಕಟ್ಟಿಟ್ಟ ಬುತ್ತಿ ಎಂದು ಮನನೋಯುವುದು ಸೂಕ್ತವಲ್ಲ ಇಂದಿನ ಸೋಲು ನಾಳೆಯ ಗೆಲುವು ಎಂಬುದು ಸೂಕ್ತವಾಗಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಹಿರಿಯರು ಹೇಳಿದಂತೆ ವೇದ ಸುಳ್ಳಾದರು ಗಾದೆ ಸುಳ್ಳಾಗಲಾರದು ಎಂಬ ಮಾತು ನೂರಕ್ಕೆ ನೂರು ಸತ್ಯ ಅಂತೆಯೇ ಮೇಲೆ ಹೇಳಿದ ಗಾದೆ ಮಾತು "ಇಂದಿನ ಸೋಲು ನಾಳಿನ ಗೆಲುವು" ಇದು ಎಲ್ಲರ ಜೀವನದಲು ರೂಢಿಸಿಕೊಳ್ಳಬೇಕಾದ್ದು ಹಾಗು ಅರಿವನ್ನು ಮೂಡಿಸಬೇಕಾದ್ದು ಯಾವುದೇ ಸ್ಪರ್ಧೆ ಅಥವಾ ಸವಾಲುಗಳಲ್ಲಿ ನಾವು ಗೆಲ್ಲಲೇ ಬೇಕೆಂಬುದು ಮುಖ್ಯವಲ್ಲ ಗೆಲ್ಲುವ ಆತ್ಮಬಲವೊಂದೇ ಮುಖ್ಯ. ಆತ್ಮಬಲ ಎಲ್ಲ ಬಲಗಳಿಗಿಂತ ಶಕ್ತಿಯುತವಾದದ್ದು. ವಿದ್ಯೆ, ಐಶ್ವರ್ಯ, ಅಧಿಕಾರ, ಜಾತಿ, ಜನ, ದೇಹ ಇವೆಲ್ಲ ಆತ್ಮಬಲದ ಮುಂದೆ ನಿಸ್ತೇಜ, ನಿಶ್ಚಕ್ತಗಳು. ಗೆಲುವು ಸಾಧಿಸಲು ಆತ್ಮಬಲವೊಂದೇ ದಾರಿ. ಇಂದು ಸೋತರೂ ಮುಂದೆ ನಾವು ಗೆಲ್ಲುವ ಆತ್ಮವಿಶ್ವಾಸ ಮೂಡಿಸಿಕೊಂಡಿದ್ದರೇ ಗೆಲುವಿನ ಮೆಟ್ಟಿಲು ಕೈಗೆ ಎಟುಕದೆ ಇರುವಂತಹುದೇನಲ್ಲಾ.
ಭಾರತಕ್ಕೆ ಸ್ವಾತಂತ್ರ್ಯ ಬರಲು ಎಷ್ಟೋ ಜನ ತಮ್ಮ ದೇಹವನ್ನು ತೆತ್ತಿದ್ದಾರೆ ಅಂತೆಯೇ ನಮಗೆಲ್ಲಾ ಸ್ವಾತಂತ್ರ್ಯದ ಬಾಗಿಲು ತೋರಿಸಲು ಮಹಾತ್ಮಗಾಂಧಿಯವರು ಹಲವು ಭಾರಿ ಸೋತು ಕೊನೆಗೆ ತಮ್ಮ ಆತ್ಮಬಲ, ಅಹಿಂಸಾವಾದದಿಂದ ಗೆಲುವಿನ ಮೆಟ್ಟಿಲೇರಿದರು ಹಾಗೆಯೇ ನಾವು ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ ಅಂದು ಅಲ್ಲಿ ಸೋತರೆ ಸೋಲಿನಲ್ಲೂ ಒಂದು ಹಿತವೆನಿಸುವ ಹಾಗು ಮುಂದಿನ ಗೆಲುವಿಗೆ ನಾಂದಿಯಾಡುವ ಹಸಿರ ಚಿಹ್ನೆಯ ಅನುಭವ ಮೂಡುತ್ತದೆ.
ಸಾಮಾನ್ಯ ಉದಾಹರಣೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಮನಸಾಗಿದೆ ನನ್ನ ಚಿರಪರಿಚಿತ ಸ್ನೇಹಿತ ಹಳ್ಳಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ ನಗರದಲ್ಲಿ ಅಭಿಯಂತರ(ಇಂಜಿನಿಯರ್)ನಾಗಬೇಕೆಂಬ ಬಯಕೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ ಆದರೆ ಇಂಜಿನಿಯರ್ ಆಗುವುದು ನನ್ನ ಕೈಗೆ ಎಟುಕದ ಕನಸೆಂದು ಸೋಲುವತ್ತ ಬಂದಿದ್ದ ತನ್ನ ಪರೀಕ್ಷೆಯಲ್ಲಿ ಸೋಲು ಕಂಡಿದ್ದ ಕೂಡ, ಆ ಸೋಲು ಅವನ ಜೀವನದ ಮೊದಲ ಸೋಲು ಅದರಿಂದ ಚೇತರಿಸಿಕೊಳ್ಳಲು ಬಹಳ ಪ್ರಯತ್ನಪಟ್ಟು ಮಾನಸಿಕ ಹಿಂಸೆಯಲ್ಲಿ ಮುಳುಗಿದ್ದ ಇಂತಹ ಪರಿಸ್ಥಿತಿಯಲ್ಲಿ ಸ್ನೇಹಿತರು ಅವನ ಆತ್ಮಬಲವನ್ನು ಎಚ್ಚರಿಸಿದರು ಅಂತೆಯೇ ಅವನು ತನ್ನ ಸೋಲೂಂದು ಗೆಲುವಿನ ಪಾಠವೆಂದು ತಿಳಿದು ಸಾಧಿಸಿ ತೋರಿಸಿಯೇ ಬಿಟ್ಟ ಈಗ ಅವನು ಒಂದು ಅತ್ಯುನ್ನತ ಸ್ಥಾನದಲ್ಲಿದ್ದಾನೆ. ಹಲವಾರು ಜನ ಅವನ ಮಾರ್ಗದರ್ಶನದಿ ಸಾಗುತ್ತಿದ್ದಾರೆ. ಅಂದು ಅವನು ನಾ ಸೋತೆನೆಂದು ಕುಳಿತಿದ್ದರೇ ಇಂದು ಯಾರು ಅವನ ಮಾರ್ಗದರ್ಶನಕೆ ಬರುತ್ತಿರಲಿಲ್ಲ. ಹಿರಿಯರ ಮಾತಿನಂತೆ ಗಾದೆ ಸುಳ್ಳಾಗಲಿಲ್ಲ ಈ ಉದಾಹರಣೆಯಲ್ಲಿ.
ಅಂದು ತಾನು ಕನ್ನಡ ಮಾದ್ಯಮದಲ್ಲಿ ಓದಿದ್ದೇನೆ ನನಗೆ ಆಂಗ್ಲಭಾಷೆ ಭರಿಸುವುದು ಕಷ್ಟಕರವೆಂದು ಕೈಚೆಲ್ಲಿದ್ದರೆ ಆತ ಪ್ರಭುದ್ದಮಾನಕ್ಕೆ ಏರುವಂತಾಗುತ್ತಿರಲಿಲ್ಲ.
ಈ ಗಾದೆಯ ಮಾತಿನ ನೀತಿಯೇನೆಂದರೆ ಸೋಲುಂಡರು ಎದೆಗುಂದದೆ ಮುಂದೆ ಸಾಗಬೇಕು ಗೆಲುವು ಸ್ವೀಕರಿಸಿದ ಹಾಗೆ ಸೋಲನ್ನು ಸ್ವೀಕರಿಸಿ ಅನುಭವ ಪಡೆದುಕೊಳ್ಳಬೇಕು, ಮುಂದೂಂದು ದಿನ ಅತಿ ಹೆಗ್ಗಳಿಕೆಯ ಪ್ರೀತಿಪೂರ್ವಕದ ಗೆಲುವು ನಿಮ್ಮದಾಗಬಹುದೆಂದು. ಸೋತುಗೆದ್ದವನ ಕೀರ್ತಿ ಚಿರಕಾಲ.
(ಕುವೈಟ್ ಕನ್ನಡ ಕೊಟದ ಮರಳುಮಲ್ಲಿಗೆಯ ಸಂಚಿಕೆಯಲ್ಲಿ ಬಿತ್ತರವಾದ ಲೇಖನ)