ಬುಧವಾರ, ಮೇ 20, 2009

ಊರು ಉಪಕಾರ ಅರಿಯದು;ಹೆಣ ಸಿಂಗಾರ ಅರಿಯದು:

ಒಂದೊಂದು ಗಾದೆಯ ಹಿಂದೆ ಅನುಭವದ ದೃಷ್ಟಾಂತವಿರುತ್ತದೆ. ಊರು ಉಪಕಾರ ಅರಿಯದು; ಹೆಣ ಸಿಂಗಾರ ಅರಿಯದು ಎಂಬ ಗಾದೆ ಮಾತಿನಲ್ಲಿ ಅಡಗಿದ ಅರ್ಥ ಮಾರ್ಮಿಕವಾದುದು. ಊರು ಅಂದರೆ ಜನಸಮೂಹ. ಒಬ್ಬ ಅಪಾರ ಉದಾರ, ದಾನ, ಧರ್ಮ ಈ ಸ್ವಭಾವದ ವ್ಯಕ್ತಿಯು ನಿಸ್ವಾರ್ಥತೆಯಿಂದ ಪರೋಪಕಾರವನ್ನು ಮಾಡುತ್ತಿದ್ದ. ಅವನು ಒಬ್ಬಿಬ್ಬ ವ್ಯಕ್ತಿಗೆ ಸಹಾಯ ಮಾಡುತ್ತಿರಲಿಲ್ಲ, ಇಡಿ ಜನಸಮೂಹಕ್ಕೆ ಉಪಕಾರ ಮಾಡುತ್ತಿದ್ದ. ಉಪಕಾರಕ್ಕೆ ಪ್ರತಿಯಾಗಿ ಅವನೇನೂ ಫಲ ಆಗಲಿ ಸಹಾಯ ಹಸ್ತವನ್ನಾಗಲಿ ಬಯಸಿದವನಲ್ಲ. ಕೊನೆ ಕೊನೆಯಲ್ಲಿ ಎಲ್ಲರಂತೆ ಅವನೂ ಸಹ ವಯೋಮಾನದಿಂದ ಮುದುಕನಾಗಿ ಅಸಹಾಯಕ ವ್ಯಕ್ತಿಯಾಗಿ ಬಿಟ್ಟ. ಉಪಕಾರ ಮಾಡುವ ಶಕ್ತಿ, ಯುಕ್ತಿಯಾಗಲಿ ಅವನಿಗಿರಲಿಲ್ಲ ಎಲ್ಲವು ನಶಿಸಿದ ಜೀವ ಅಶಕ್ತನಾಗಿದ್ದ. ಅಸಹಾಯಕನೊ, ಅಶಕ್ತನೂ ಆಗಿರುವ ಆತ ಇನ್ನೊಬ್ಬರ ಸಹಾಯ, ನೆರವು, ಬೆಂಬಲ ಬಯಸಿದಾಗ ಯಾರು ಅವನತ್ತ ತಿರುಗಿ ನೋಡದಾದರು!! ಊರು ಅವನನ್ನು ಮರೆತಿದೆ. ಅವನ ಕಾಲದಲ್ಲಿ ಉಪಕೃತರಾದವರು ತೀರಿಕೊಂಡಿದ್ದಾರೆ. ಬದುಕಿ ಉಳಿದವರಿಗೆ ಅವನ ನೆನಪು ಮಾಸಿದೆ. ಇದು, ಸಾಮೂಹಿಕವಾಗಿ ಉಪಕಾರ ಮಾಡಿದವನಿಗೆ ಸಿಕ್ಕ ಪುರಸ್ಕಾರ ಅಥವಾ ಫಲ!

ಈ ಮೇಲಿನ ಅನುಭವಕ್ಕೆ ಉಪಮೆಯವಾಗಿ ಬಂದಿರುವ ಮಾತು ಹೆಣ ಸಿಂಗಾರವರಿಯದು ಎಂಬುದು. ನಿರ್ಜೀವ ದೇಹವನ್ನು ಎಷ್ಟೇ ಅಲಂಕರಿಸಿದರೂ ಸತ್ತ ವ್ಯಕ್ತಿಗೆ ಧನ್ಯತಾಭಾವ ಹುಟ್ಟಲಾರದು!! ಹೆಣಕ್ಕೆ ಸಿಂಗಾರ ವ್ಯರ್ಥ ಅದೇ ರೀತಿ ಊರಿಗೆ ಉಪಕರಿಸಲು ಹೊರಟರೆ ವ್ಯರ್ಥ ಪರಿಣಾಮ ಎಂಬುದು ಲೋಕಾನುಭವ. ಈ ಗಾದೆ ಮಾತಿನ ನೀತಿಯೆಂದರೆ, ಉಪಕಾರ ಮಾಡುವಾಗ ಯೋಗ್ಯರಿಗೆ ಮಾಡಬೇಕು, ಉಪಕೃತಿಯ ಪ್ರಜ್ಞೆ, ನೆನಪು, ಉಳ್ಳವರಿಗೆ ಮಾಡಬೇಕು. ಈ ಎಚ್ಚರ ಇರದಿದ್ದರೆ ಉಪಕಾರ ಬುದ್ಧಿಗೆ ಬೆಲೆಯಿಲ್ಲ ಅಥವಾ ನೆಲೆಯಿಲ್ಲ. ಕಿರಿಯರಿಗೆ ಹಿರಿಯರು ಸೂಚಾರ್ಥ್ಯದಲ್ಲಿ ನೀಡಿದ ಶಿಕ್ಷಣವೆಂದರೆ ಗಾದೆಗಳ ಪ್ರಯೋಗ.

9 ಕಾಮೆಂಟ್‌ಗಳು:

  1. ನಾವು ಕೊಡುವ ದೇಣಿಗೆ ಅಪಾತ್ರರ ಕೈಸೇರಿದರೆ ದುರ್ವಿನಿಯೋಗವಾಗುತ್ತದೆ. ನಿಮ್ಮ ಬರಹದೊಳಗಿನ ನೀತಿ ಚೆನ್ನಾಗಿದೆ.

    ಪ್ರತ್ಯುತ್ತರಅಳಿಸಿ
  2. ಪರಾಂಜಪೆ ಸರ್,
    ಧನ್ಯವಾದಗಳು ನಿಮ್ಮ ಅನಿಸಿಕೆಗೆ.. ಒಳ್ಳೆಯದಕ್ಕೆ ಒತ್ತುಕೊಡಬೇಕಿದೆ.. ಅಲ್ಲವೆ

    ಸುನಾಥ್ ಸರ್,
    ಧನ್ಯವಾದಗಳು ನಿಮ್ಮ ಅನಿಸಿಕೆಗೆ

    ಪ್ರತ್ಯುತ್ತರಅಳಿಸಿ
  3. ಒಂದು ಸೊಗಸಾದ ಗಾದೆ. ಮತ್ತು ಅದರ ವಿವರಣೆಯೂ ಚೆನ್ನಾಗಿದೆ...
    ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  4. ಶಿವು ಸರ್,
    ನಿಮ್ಮ ಅನಿಸಿಕೆಗೆ ನನ್ನ ಧನ್ಯವಾದಗಳು
    ರಾಜೇಶ್
    ನಿಮಗೆ ಸ್ವಾಗತ ನೀವು ಮೆಚ್ಚಿದರೆಂದರೆ ನಮಗೆ ಖುಷಿ ಹೀಗೆ ಬರುತ್ತಲಿರಿ

    ಪ್ರತ್ಯುತ್ತರಅಳಿಸಿ